ದೇಶದ ಅಭಿವೃದ್ಧಿಗೆ ಅರ್ಥಕ್ರಾಂತಿಯಿಂದ ತಾಂತ್ರಿಕ ಪರಿಹಾರ: ಅನಿಲ್ ಬೋಕಿಲ್
ಮಂಗಳೂರು, ಮಾ.21: ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ‘ಅರ್ಥಕ್ರಾಂತಿ’ಯು ತಾಂತ್ರಿಕ ಪರಿಹಾರವನ್ನು ಒದಗಿಸಲಿದೆ ಎಂದು ಅರ್ಥಕ್ರಾಂತಿಯ ರುವಾರಿ ಅನಿಲ್ ಬೋಕಿಲ್ ಅಭಿಪ್ರಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಥಕ್ರಾಂತಿಗೆ ಸಂಬಂಧಿಸಿ ಕಳೆದ 20 ವರ್ಷಗಳಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ ಎಂದರು.
ಅರ್ಥಕ್ರಾಂತಿಯ ಕುರಿತಂತೆ ನೆರೆಯ ಪಾಕಿಸ್ತಾನವೂ ಆಸಕ್ತಿ ತೋರ್ಪಡಿಸಿದ್ದು, ತನ್ನ ದೇಶದ ಭದ್ರತೆಗೆ ಸಂಬಂಧಿಸಿ ಇದು ಅಗತ್ಯವೆಂಬುದನ್ನೂ ುನಗಂಡಿದೆ ಎಂದವರು ಹೇಳಿದರು.
ಹಳೆ ನೋಟುಗಳ ಅಮಾನ್ಯಗೊಳಿಸುವ ಪ್ರಕ್ರಿಯೆ ಕಪ್ಪು ಹಣವನ್ನು ನಿರ್ಬಂಧಿಸುವಲ್ಲಿ ಉತ್ತಮ ಸಾಧನ ಎಂದೂ ಅವರು ಹೇಳಿದರು.
ತಾನು ಪ್ರತಿಪಾದಿಸುತ್ತಿರುವ ಅರ್ಥಕ್ರಾಂತಿಯು ಆರ್ಥಿಕ ಸುಧಾರಣೆಯ ಪ್ರಮುಖ ಐದು ಸೂತ್ರಗಳಡಿ ನೆಲೆ ನಿಂತಿದೆ. ಅದರ ಪ್ರಕಾರ ಪ್ರಥಮವಾಗಿ ಪ್ರಸ್ತುತ ಜಾರಿಯಲ್ಲಿರುವ ತೆರಿಗೆ ಪದ್ಧತಿಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕಿದೆ. (ಆಮದು ಸುಂಕವನ್ನು ಹೊರತುಪಡಿಸಿ) ಎಂದವರು ಹೇಳಿದರು.
ಎರಡನೆಯದಾಗಿ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರಗಳು ನಿಗದಿತ ಪ್ರಮಾಣದ ತೆರಿಗೆ (ಶೇ. 2ರಂತೆ)ಯನ್ನು ಹೊಂದಿರಬೇಕು. ಇದು ಒಂದೇ ಕಡೆ ವಿಧಿಸಲಾಗುವ ತೆರಿಗೆಯಾಗಿ ಪರಿವರ್ತನೆಯಾಗಬೇಕು. ಇದರಿಂದ ಸರಕಾರಕ್ಕೆ ಆದಾಯವೂ ಸಿಗಲಿದೆ. ಜನರಿಗೆ ನಾನಾ ರೀತಿಯ ತೆರಿಗೆಗಳ ತಲೆಬಿಸಿಯೂ ತಪ್ಪಲಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಂಕ್ ವ್ಯವಹಾರಗಳ ಮೇಲಿನ ತೆರಿಗೆಯು ಯಾರ ಖಾತೆಗೆ ಹಣ ಜಮಾವಣೆಯಾಗುತ್ತದೆಯೋ ಅದರ ಮೇಲೆ ವಿಧಿಸುವಂತಾಗಬೇಕು. ಇದು ನೈಜ ಸಮಯದ ತೆರಿಗೆಯಾಗಿ ಮಾರ್ಪಟ್ಟಾಗ ಯಾವುದೇ ರೀತಿಯ ಅಡೆತಡೆಗಳು ಇರುವುದಿಲ್ಲ. ಮೂರನೆಯದಾಗಿ 50 ರೂ. ಮುಖಬೆಲೆಯ ನೋಟುಗಳಿಂದ ಹೆಚ್ಚಿನ ವೌಲ್ಯದ ಎಲ್ಲಾ ನೋಟುಗಳನ್ನು ಹಿಂಪಡೆಯಬೇಕು. ಇದು ಹಂತ ಹಂತವಾಗಿ ನಡೆಯಬೇಕಾದ ಪ್ರಕ್ರಿಯೆ. ಇದು ಕೊನೆಗೆ ಕೇವಲ 50 ಮುಖಬೆಲೆಯ ನೋಟುಗಳಿಗೆ ಸೀಮಿತಗೊಳ್ಳುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ನಾಲ್ಕನೆಯದಾಗಿ ನಗದು ವ್ಯವಹಾರವು ಯಾವುದೇ ರೀತಿಯ ತೆರಿಗೆಯನ್ನು ಹೊಂದಿರಬಾರದು. ಕೊನೆಯದಾಗಿ ನಿಗದಿತ ಪ್ರಮಾಣದವರೆಗಿನ ನಗದು ವ್ಯವಹಾರಗಳನ್ನು ನಿರ್ಬಂಧಿಸಲು ಸರಕಾರ ಕಾನೂನಿನಲ್ಲಿ ಅವಕಾಶ ಕಲ್ಪಿಸಬೇಕು ಎಂದವರು ವಿವರಿಸಿದರು.
ಜಿಎಸ್‌ಟಿಗಿಂತಲೂ ಬಿಬಿಟಿ ಉತ್ತಮ
ಪ್ರಸ್ತುತ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಜಿಎಸ್‌ಟಿ ತೆರಿಗೆ ಪದ್ಧತಿ ಉತ್ತಮವಾಗಿದೆ. ಆದರೆ ಅದಕ್ಕಿಂತಲೂ ಬಿಬಿಟಿ (ಬ್ಯಾಂಕ್ ವ್ಯವಹಾರ ತೆರಿಗೆ- ಬ್ಯಾಂಕ್ ಟ್ರಾನ್ಸಾಕ್ಷನ್ ಟ್ಯಾಕ್ಸ್) ಜಾರಿಗೊಳಿಸುವುದು ಉತ್ತಮ ಎಂದು ಅವರು ಅಭಿಪ್ರಾಯಿಸಿದರು.
ಕಳೆದ 20 ವರ್ಷಗಳಿಂದ ತಾನು ಪ್ರತಿಪಾದಿಸುತ್ತಿರುವ ಅರ್ಥಕ್ರಾಂತಿ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಪ್ರಶಾಂತ್, ಜಿನೇಂದ್ರ ಕುಮಾರ್, ರವೀಂದ್ರನಾಥ್ ಶ್ಯಾನುಭೋಗ್, ಮುಖೇಶ್ ಹೆಗ್ಡೆ, ಪ್ರಸಾದ್ ಅಡಪ ಉಪಸ್ಥಿತರಿದ್ದರು.