×
Ad

ಮಾ. 26 : ಕಾಪುವಿನಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

Update: 2017-03-21 20:05 IST

ಕಾಪು,ಮಾ.21 : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದು, ಪ್ರಸ್ತುತ ಭಡ್ತಿಯೊಂದಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ ರಬೀಂದ್ರನಾಥ್ ಬೋಳಾರ್ ಇವರ ಸೇವಾ ನಿವೃತ್ತಿಯ ಪ್ರಯುಕ್ತ ಅಭಿಮಾನಿ ಬಳಗ ಮತ್ತು ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಇವರ ನೇತೃತ್ವದಲ್ಲಿ ಮಾ. 26ರಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ದಂಡತೀರ್ಥ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಎಂ. ನೀಲಾನಂದ್ ನಾಯ್ಕಾ ಹೇಳಿದರು.

ಕಾಪು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲಾ ಆಸ್ಪತ್ರೆ ಮತ್ತು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಮೂಲಕ 200 ಕ್ಕೂ ಅಧಿಕ ಯುನಿಟ್ ರಕ್ತವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

ಕಾರ್ಯಕ್ರಮದ ಆಯೋಜಕ  ಕಾಪು ಸೂರಿ ಶೆಟ್ಟಿ ಮಾತನಾಡಿ, ಡಾ.ರಬೀಂದ್ರನಾಥ ಬೋಳಾರ್ ಅವರು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 20 ವರ್ಷಗಳ ಕಾಲ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಅವರ ಸೇವಾವಧಿಯು ಜನ ಸಾಮಾನ್ಯರಿಗೆ ಅತ್ಯಂತ ಉಪಯೋಗಕಾರಿಯಾಗಿತ್ತು. ಕಾಪು ಮತ್ರವಲ್ಲದೇ ಶಿರ್ವ, ಮೂಡಬೆಟ್ಟು, ಪಡುಬಿದ್ರಿ ವ್ಯಾಪ್ತಿಯಲ್ಲೂ ಅನೇಕ ಅಪಘಾತ ಇತ್ಯಾದಿ ಪ್ರಕರಣಗಳ ಸಂದರ್ಭ ತುರ್ತು ವೈದ್ಯಕೀಯ ಚಿಕಿತ್ಸೆ, ಮೃತಪಟ್ಟವರ ಶವ ಮರಣೋತ್ತರ ಪರೀಕ್ಷೆ ಇತ್ಯಾದಿ ಕಾರ್ಯಗಳಲ್ಲಿ ಬೋಳಾರ್ ಅವರು ನೀಡಿರುವ ಸೇವೆ ಸ್ಮರಣೀಯವಾಗಿದೆ. ಅದರ ಸ್ಮರಣೆಗಾಗಿ ಅಭಿಮಾನಿಗಳ ಒತ್ತಾಸೆಯಿಂದಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಕಾಪುವಿನಲ್ಲಿ ಮುಂದಿನ ದಿನಗಳಲ್ಲಿ ರಕ್ತದಾನಿಗಳ ಪಟ್ಟಿ ಸಂಗ್ರಹ ಮತ್ತು ನಿರಂತರ ರಕ್ತದಾನಕ್ಕೆ ಪ್ರೋತ್ಸಾಹ, ಕಿಡ್ನಿ, ಹೃದಯವೂ ಸೇರಿದಂತೆ ಅಂಗಾಂಗ ದಾನ, ಕಣ್ಣು ದಾನವೂ ಸೇರಿದಂತೆ ಇತರ ಆವಶ್ಯಕತೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಇತರ ಸಂಘ - ಸಂಸ್ಥೆಗಳ ಸಹಯೋಗವನ್ನೂ ಪಡೆಯಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News