ಶುಲ್ಕ ವಿನಾಯಿತಿ; ಬ್ಯಾಂಕ್‌ಗಳಿಗೆ ಜಮಾ

Update: 2017-03-21 15:08 GMT

ಉಡುಪಿ, ಮಾ.21: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2016-17ನೇ ಸಾಲಿನಲ್ಲಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಯೋಜನೆಯಡಿ ಅನುದಾನ ಮಂಜೂರಾಗಿದೆ. ಅದರಂತೆ ಜಿಲ್ಲೆಯ 176 ಕಾಲೇಜುಗಳ 25,188 ವಿದ್ಯಾರ್ಥಿಗಳಿಗೆ ಒಟ್ಟು 8,66,58,217 ರೂ. ಅನುದಾನವನ್ನು ಆಯಾ ಕಾಲೇಜುಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಂದ ಈಗಾಗಲೇ ಶುಲ್ಕಗಳನ್ನು ವಸೂಲು ಮಾಡಿದ್ದಲ್ಲಿ, ಈಗ ಮಂಜೂರಾದ ಮೊತ್ತವನ್ನು ಸಂಬಂಧಿಸಿದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿ ಬಟವಾಡೆ ತಖ್ತೆಯನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಚೇರಿಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಕೆಲವು ಕಾಲೇಜುಗಳ ಪ್ರಾಂಶುಪಾಲರು ಈಗಾಗಲೇ ವಿದ್ಯಾರ್ಥಿಗಳಿಂದ ಪ್ರವೇಶ ನೀಡುವಾಗ ಶುಲ್ಕಗಳನ್ನು ವಸೂಲಿ ಮಾಡಿದ್ದು, ಈಗ ಮಂಜೂರಾದ ಮೊತ್ತವನ್ನು ವಿದ್ಯಾರ್ಥಿಗಳಿಗೆ ಪಾವತಿಸದೆ ಇರುವುದು ಗೊತ್ತಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಂದ ದೂರುಗಳು ಬರುತ್ತಿದ್ದು, ಕೂಡಲೇ ಶುಲ್ಕ ವಿನಾಯಿತಿ ಮೊತ್ತವನ್ನು ವಿದ್ಯಾರ್ಥಿಗಳಿಗೆ ಪಾವತಿಸುವಂತೆ ಸೂಚಿಸಲಾಗಿದೆ.

ಇದೊಂದು ಗಂಭೀರ ವಿಷಯವಾಗಿದ್ದು, ಈ ರೀತಿ ಶುಲ್ಕ ವಿನಾಯಿತಿ ಮೊತ್ತವನ್ನು ವಿದ್ಯಾರ್ಥಿಗಳಿಗೆ ಪಾವತಿಸದೇ ಇದ್ದಲ್ಲಿ ಅಂತಹ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News