ಮಣಿಪಾಲ: ನಾಳೆಯಿಂದ ಅಂಧರ ಏಷ್ಯನ್ ಚೆಸ್ ಟೂರ್ನಿ
ಮಣಿಪಾಲ, ಮಾ.21: ಆತಿಥೇಯ ಭಾರತವೂ ಸೇರಿದಂತೆ ಒಟ್ಟು ಎಂಟು ರಾಷ್ಟ್ರಗಳು ನಾಳೆಯಿಂದ ಮಾ.31ರವರೆಗೆ ಅಂಧರಿಗಾಗಿ ಕೆಎಂಸಿ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆಯುವ ಅಂತಾರಾಷ್ಟ್ರೀಯ ಬ್ರೆಯ್ಲಿ ಚೆಸ್ ಅಸೋಸಿಯೇಷನ್ (ಐಬಿಸಿಎ) ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲಿವೆ.
ಅಂಧರ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌ಬಿ), ಐಬಿಸಿಎ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್‌ಗಳ ಸಹಯೋಗದೊಂದಿಗೆ ಈ ಟೂರ್ನಿಯನ್ನು ಮಣಿಪಾಲ ವಿವಿಯ ಆಶ್ರಯದಲ್ಲಿ ಮೊದಲ ಬಾರಿಗೆ ಮಣಿಪಾಲದಲ್ಲಿ ಆಯೋಜಿಸುತ್ತಿವೆ.
ಅಂಧ ಚೆಸ್ ಪಟುಗಳಿಗೆ ಏಷ್ಯ ಮಟ್ಟದಲ್ಲಿ ನಡೆಯುವ ಅತ್ಯಂತ ದೊಡ್ಡ ಸ್ಪರ್ಧೆ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಚಾಂಪಿಯನ್‌ಗಳು ಹಾಗೂ ಅಗ್ರಗಣ್ಯ ಚೆಸ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಭಾರತವಲ್ಲದೇ, ಮಂಗೋಲಿಯಾ, ಯಮೆನ್, ಬಾಂಗ್ಲಾದೇಶ, ಪಿಲಿಪ್ಲೈನ್ಸ್, ಇರಾನ್, ಶ್ರೀಲಂಕಾ ಹಾಗೂ ನೇಪಾಳದ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ವೆಬ್‌ಕಾಸ್ಟ್‌ನಲ್ಲಿ ಚೆಸ್ ಪಂದ್ಯಗಳ ನೇರ ಪ್ರಸಾರವಿದ್ದು, ಇದಕ್ಕಾಗಿಯೇ ‘ರೇಡಿಯೊ ಚೆಸ್’ ಎಂಬ ಆ್ಯಪ್‌ನ್ನು ಬಿಡುಗಡೆಗೊಳಿಸಲಾಗಿದೆ. ಟೂರ್ನಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮಣಿಪಾಲ ವಿವಿ ಇಬ್ಬರು ಕ್ರೀಡಾಪಟುಗಳನ್ನು- ಪ್ರಕಾಶ್ ಜಯರಾಮಯ್ಯ ಹಾಗೂ ಸಮರ್ಥ್ ಜೆ. ರಾವ್- ಸನ್ಮಾನಿಸಲಿವೆ. ಜಯರಾಮಯ್ಯ ಅವರು ಅಂಧರ ಭಾರತ ಕ್ರಿಕೆಟ್ ತಂಡದ ಉಪನಾಯಕರಾದರೆ, ಮೂಲತ: ಕುಂದಾಪುರದ ಸಮರ್ಥ ಜೆ.ರಾವ್ ಚೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿ ಕಲಿಯುತಿದ್ದಾರೆ. ಅವರು ವಿಕಲಚೇತನರ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.