ಪತ್ರಿಕಾಂಗದ ಬೇಡಿಕೆಗಳಿಗೆ ಸರಕಾರಗಳಿಂದ ನಿರ್ಲಕ್ಷ್ಯ: ಎನ್.ರಾಜು

Update: 2017-03-21 15:39 GMT

ಬಂಟ್ವಾಳ, ಮಾ. 21: ಪ್ರಜಾಪ್ರಭುತ್ವದ ಮೂರು ಅಂಗಗಳು ಸರಕಾರದಿಂದ ಎಲ್ಲ ತರದ ಸವಲತ್ತುಗಳನ್ನು ಪಡೆಯುತ್ತಿದ್ದರೆ ನಾಲ್ಕನೆ ಅಂಗವಾದ ಪತ್ರಿಕಾರಂಗ ಸರಕಾರದ ಎಲ್ಲ ಸವಲತ್ತುಗಳಿಂದ ವಂಚಿತವಾಗಿದೆ. ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಹಾಗೂ ಕೇಂದ್ರದ ಎಲ್ಲ ಸರಕಾರಗಳೂ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು ಹೇಳಿದರು.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್‌ಕ್ಲಬ್ ಮತ್ತು ರಜತ ವರ್ಷಾಚರಣೆ ಸಮಿತಿ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡ ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಕರ್ನಾಟಕ ರಾಜ್ಯದಲ್ಲೇ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ ಅಭಿನಂದಿಸಲಾಗುವುದು ಎಂದು ಹೇಳಿದ ಅವರು, ರಾಜ್ಯದಲ್ಲೇ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಈ ಮೂರು ಜಿಲ್ಲೆಗಳಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಲವಾರು ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಮನ ಗೆದ್ದಿದ್ದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಗತಿಪರ ಕೃಷಿಕ ರಾಜೇಶ್‌ನಾಯಕ್ ಉಳಿಪಾಡಿಗುತ್ತು ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ವಹಿಸಿದ್ದರು. ವೇದಿಕೆಯಲ್ಲಿ ರಜತ ವರ್ಷಾಚರಣೆ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಗಟ್ಟಿ, ಅಧ್ಯಕ್ಷ ಇಬ್ರಾಹೀಂ ಅಡ್ಕಸ್ಥಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ವೆಂಕಟೇಶ್ ಬಂಟ್ವಾಳ ಉಪಸ್ಥಿತರಿದ್ದರು. ರಜತ ವರ್ಷಾಚರಣೆ ಸಮಿತಿ ಸಂಚಾಲಕ ಹರೀಶ್ ಮಾಂಬಾಡಿ ಸ್ವಾಗತಿಸಿದರು. ಪತ್ರಕರ್ತ ರಮೇಶ್ ಕೆ. ಪುಣಚ್ಚ ವಂದಿಸಿದರು. ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ವಿಚಾರ ಸಂಕಿರಣ: ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮದ ಪ್ರಯಕ್ತ ಮಂಗಳವಾರ ಬೆಳಗ್ಗೆ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

ವಿಚಾರಸಂಕಿರಣ ಕಾರ್ಯಕ್ರಮವನ್ನು ಟಿ.ವಿ. ನಿರೂಪಕಿ ನವಿತಾ ಜೈನ್ ಉದ್ಘಾಟಿಸಿದರು. ಬಳಿಕ ಅವರು ದೃಶ್ಯ ಮಾಧ್ಯಮ ಮತ್ತು ಶ್ರವಣ ಮಾಧ್ಯಮ ಭವಿಷ್ಯದ ಸವಾಲುಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿದರೆ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಕಾರ್ಯದರ್ಶಿ ಬಿ.ವೆಂಕಟಸಿಂಗ್ ಮುದ್ರಣ ಮಾಧ್ಯಮ ಮತ್ತು ಅಂತರ್ಜಾಲ ಮಾಧ್ಯಮ ಭವಿಷ್ಯದ ಸವಾಲುಗಳು ಕುರಿತು ವಿಷಯ ಮಂಡಿಸಿದರು. ಎರಡೂ ವಿಚಾರ ಸಂಕಿರಣದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.

ರಜತ ವರ್ಷಾಚರಣೆಯ ಗೌರವಾಧ್ಯಕ್ಷ ಪ್ರೊ. ಬಾಲಕೃಷ್ಣ ಗಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್‌ರನ್ನು ಗೌರವಿಸಲಾಯಿತು. ಪ್ರೆಸ್‌ಕ್ಲಬ್ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ರಜತ ವರ್ಷಾಚರಣಾ ಸಮಿತಿ ಅಧ್ಯಕ್ಷ ಇಬ್ರಾಹೀಂ ಅಡ್ಕಸ್ಥಳ, ಪತ್ರಕರ್ತ ಹರೀಶ ಕೆ.ಆದೂರು ಉಪಸ್ಥಿತರಿದ್ದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ಎಂ.ಎಸ್.ಮುಹಮ್ಮದ್, ತುಂಗಪ್ಪ ಬಂಗೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ಸುಧಾಕರ್, ತಾಪಂ ಸದಸ್ಯ ಪ್ರಭಾಕರ್ ಪ್ರಭು, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ. ಶಂಭೂರು, ಲಯನ್ಸ್ ದಾಮೋದರ್, ಸಾಮಾಜಿಕ ಕಾರ್ಯಕರ್ತ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ತಾಲೂಕು ಕಸಪ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ ಮೊದಲಾದ ಗಣ್ಯರು ಭಾಗವಹಿಸಿದರು. ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ರಜತ ವರ್ಷಾಚರಣಾ ಸಮಿತಿ ಸಂಚಾಲಕ ವೆಂಕಟೇಶ ಬಂಟ್ವಾಳ ವಂದಿಸಿದರು. ರಂಗಕರ್ಮಿ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ಸಂದೀಪ ಸಾಲ್ಯಾನ್, ಯಾದವ ಕುಲಾಲ್, ಚಂದ್ರಶೇಖರ ಕಲ್ಮಲೆ, ಕಿಶೋರ್ ಪೆರಾಜೆ, ಇಮ್ತಿಯಾರ್ ಶಾ, ವಾಮನ ಕರ್ಕೇರ, ಉದಯಶಂಕರ ನೀರ್ಪಾಜೆ, ಮಹಮ್ಮದ್ ಅಲಿ, ಜನಾರ್ದನ ವಿಟ್ಲ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News