ಪುತ್ತೂರು ಶ್ರೀ ಮಹಾಲಿಂಗೇಶ್ವರ ವರ್ಷಾವಧಿ ಜಾತ್ರೆ:ನಗರಸಭೆಯಲ್ಲಿ ಪೂರ್ವ ಸಿದ್ದತೆ ಸಭೆ
ಪುತ್ತೂರು,ಮಾ.21 : ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಏಪ್ರಿಲ್ 10ರಿಂದ ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಪುತ್ತೂರು ನಗರಸಭೆಯ ಸಭಾಂಗಣದಲ್ಲಿ ಪೂರ್ವ ಸಿದ್ದತಾ ಸಭೆಯು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯ ಮಹಮ್ಮದಾಲಿ ಮಾತನಾಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಆಗಮಿಸುವ ಎಲ್ಲಾ ಜನರನ್ನು ಸ್ವಾಗತಿಸಲು ಹಾಗೂ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಸ್ವಚ್ಛತೆ ಬಗ್ಗೆ ವಿಶೇಷ ಆಸ್ಥೆ ವಹಿಸಲಾಗುವುದು. ಬಲ್ನಾಡಿನಿಂದ ಉಳ್ಳಾಲ್ತಿ ಭಂಡಾರ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ಸ್ವಚ್ಛತಾ ಕಾರ್ಯ ಈಗಾಗಲೇ ಆರಂಭವಾಗಿದೆ. ಒಂದು ಕಡೆ ಸ್ಲ್ಯಾಬ್ ಹಾಕುವ ಕಾಮಗಾರಿಯೂ ನಡೆಯುತ್ತಿದೆ. ದೇವರ ಸವಾರಿ ಹೋಗುವ ರಸ್ತೆಯಲ್ಲಿ ಅಗತ್ಯ ಕಾಮಗಾರಿ, ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಜಾತ್ರೆಯನ್ನು ಯಶಸ್ವಿ ಮಾಡುವಲ್ಲಿ ನಗರಸಭೆಯೂ ದೇವಾಲಯದ ಆಡಳಿತ ಮಂಡಳಿ ಜೊತೆ ನಗರಸಭಾ ಆಡಳಿತ ಕೈಜೋಡಿಸಲಿದೆ. ಅಗತ್ಯವಿದ್ದರೆ ಇನ್ನೊಮ್ಮೆ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯ ಹಿಂದೂ ಧಾರ್ಮಿಕ ಪರಿಷತ್‌ನ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಲೋಕೇಶ್ ಹೆಗ್ಡೆ, ಪ್ರೊ.ಬಿ.ಜೆ ಸುವರ್ಣ ಅವರು ಮಾತನಾಡಿ ಜಾತ್ರಾ ಪೂರ್ವ ಸಿದ್ದತೆಗೆ ಸಂಬಂಧಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಜಾತ್ರೆಯ ಯಶಸ್ವಿಗಾಗಿ ಸಲಹೆ ನೀಡಿದರು.