ಮಂಗಳೂರು : ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Update: 2017-03-21 16:58 GMT

ಮಂಗಳೂರು, ಮಾ. 21: ಬ್ಯಾಂಕ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗುಣಾಡೆ ನಿವಾಸಿ ಸಂತೋಷ್ ಆತ್ಮರಾಮ್ ಮೊರೆ (39) ಶಿಕ್ಷೆಗೊಳಗಾದ ಅಪರಾಧಿ. ಈತ ಸಿಂಡಿಕೇಟ್ ಬ್ಯಾಂಕ್‌ನ ಕಾಟಿಪಳ್ಳ ಶಾಖೆಯ ಸಹಾಯಕ ಪ್ರಬಂಧಕಿ ಮೂಲತಃ ಕೇರಳದ ಕೋಯಿಕ್ಕೋಡ್‌ನ ನಿವಾಸಿ ಸಂಜನಾ ಕೆ.ಸಿ. (24)ಎಂಬವರನ್ನು ಹತ್ಯೆ ಮಾಡಿದ್ದ.

ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಜೀವಾವಧಿ ಶಿಕ್ಷೆ, 10 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಸಜೆ ಹಾಗೂ 3 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ.

  ಪ್ರಕರಣದ ವಿವರ: 2011ರಲ್ಲಿ ಮಂಗಳೂರಿಗೆ ಬಂದಿದ್ದ ಸಂತೋಷ್ ಆತ್ಮರಾಮ್, ಬಿಗ್ ಬಜಾರ್, ಫಿಶ್ ಮೊಂಗರ್ ಸೇರಿದಂತೆ ಹಲವೆಡೆ ಕೆಲಸ ಮಾಡಿಕೊಂಡಿದ್ದ. ಅಲ್ಲದೆ, ಬಿಜೈ ಕಾಪಿಕಾಡ್ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಬಿಗ್ ಬಜಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂದರ್ಭ ಸಂಜನಾರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. 2013 ಎ.17ರಂದು ರಾತ್ರಿ 8.30 ರ ವೇಳೆಗೆ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಸಂಜನಾರನ್ನು ಕರೆದುಕೊಂಡು ಹೋಗಿದ್ದ. ಆಗ ಮನೆಯ ಮಾಲಕಿ ಪ್ರೆಸಿಲ್ಲಾ ಅವರು ವಿರೋಧಿಸಿದ್ದು, ಇವಳು ತಾನು ಮದುವೆಯಾಗುವ ಹುಡುಗಿ, ಮಾತನಾಡಿಸಿ ಕಳುಹಿಸುತ್ತೇನೆ ಎಂದು ನಂಬಿಸಿ ಕರೆದುಕೊಂಡು ಹೋಗಿದ್ದ. ಬಳಿಕ ಬಾಡಿಗೆ ಮನೆಯೊಳಗೆ ಹೋದ ಬಳಿಕ ಸಂಜನಾ ತನಗೆ ಮದುವೆಯಾಗಲು ಬೇರೊಂದು ಹುಡುಗನನ್ನು ನೋಡಿದ್ದಾರೆ. ಆದ್ದರಿಂದ ನನಗಿನ್ನು ಕರೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ಈ ಸಂದರ್ಭ ಇವರ ಮಧ್ಯೆ ಮಾತಿಗೆ ಮಾತು ಬೆಳೆದು, ಆತ್ಮರಾಮ್ ವಯರ್‌ನಿಂದ ಯುವತಿಯ ಕುತ್ತಿಗೆ ಬಿಗಿದು ಪರಾರಿಯಾಗಿದ್ದ. ಆಕೆಯನ್ನು ಸ್ಥಳೀಯರ ಸಹಕಾರದಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಲಿಸದೆ ಸಂಜನಾ ಮೃತಪಟ್ಟಿದ್ದರು. ಈಬಗ್ಗೆ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಂದಿನ ಉರ್ವ ಇನ್‌ಸ್ಪೆಕ್ಟರ್ ರಾಮಚಂದ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 28 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಸರಕಾರದ ಪರವಾಗಿ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.

ಮುಂಬೈಯಲ್ಲೂ ಜೀವಾವಧಿ ಶಿಕ್ಷೆಗೊಳಗಾಗಿದ್ದ

ಅಪರಾಧಿ ಆತ್ಮರಾಮ್ 2005ರಲ್ಲಿ ಮುಂಬೈ ಮುಲುಂಡ್‌ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಾಜೇಶ್ವರಿ (22) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆಕೆ ಮದುವೆಯಾಗುವಂತೆ ಒತ್ತಾಯಿಸಿ, ಬಳಿಕ ಚೂರಿ ಇರಿದು ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ನಾಸಿಕ್ ಜೈಲ್‌ನಲ್ಲಿದ್ದ. ಆದರೆ ಅಲ್ಲಿ 14 ದಿನ ಪೆರೋಲ್ ಮಾದರಿಯಲ್ಲಿ ಜೈಲಿಂದ ಹೊರಬಂದು ಬಳಿಕ ನಾಪತ್ತೆಯಾಗಿ ಮಂಗಳೂರಿಗೆ ಬಂದಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News