×
Ad

ದೇಶದ ಅಭಿವೃದ್ಧಿಗಾಗಿ ಅಪಮೌಲ್ಯ ಅನಿವಾರ್ಯ ಕ್ರಮ : ಅನಿಲ್ ಬೋಕಿಲ್

Update: 2017-03-21 22:51 IST

ಮೂಡುಬಿದಿರೆ,ಮಾ.21 :‘ಯುವಶಕ್ತಿ ಯಾವಾಗಲೂ ಅಭಿವೃದ್ಧಿಯತ್ತ ಆಕರ್ಷಿತವಾಗುತ್ತದೆ. ಆದರೆ ಭಾರತದಲ್ಲಿ ಅಭಿವೃದ್ಧಿ ಎಂಬುದು ಕಪ್ಪುಹಣದಲ್ಲಿ ಅಡಕವಾಗಿದೆ. ಈ ಕಪ್ಪುಹಣದ ಅಭಿವೃದ್ಧಿಯನ್ನು ತಡೆಯುವುದು ಜೊತೆಗೆ ಯುವಜನತೆ ಕಪ್ಪುಹಣದತ್ತ ವಾಲದಂತೆ ತಡೆಯುವುದು ದೇಶದ ಮುಂದಿರುವ ದೊಡ್ಡ ಸವಾಲಾಗಿತ್ತು. ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ದೇಶವನ್ನು ನಿಜವಾದ ಅಭಿವೃದ್ಧಿಯತ್ತ ಸಾಗಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಹಣದ ಅಪಮೌಲ್ಯೀಕರಣದಂತಹ ಕ್ರಾಂತಿಕಾರಿ ಕ್ರಮವನ್ನು ಜಾರಿಗೆ ತರಬೇಕಾಯಿತು’ ಎಂದು ‘ಅರ್ಥಕ್ರಾಂತಿ’ ಸಂಘಟನೆಯ ಸದಸ್ಯ ಅನಿಲ್ ಬೋಕಿಲ್ ಹೆಳಿದರು.

ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ್ಸ್‌ ಕ್ಲಬ್ ಆಯೋಜಿಸಿದ್ದ ‘ನೋಟು ಅಮಾನ್ಯೀಕರಣ ಹಾಗೂ ಅದರ ನಂತರದ ಪರಿಣಾಮಗಳು’ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಹಣವನ್ನು ಸಾಂವಿಧಾನಿಕವಾಗಿ ಮುದ್ರಿಸುವ ಹಕ್ಕು ಸರಕಾರಕ್ಕಿರುತ್ತದೆ. ಅದರ ಮೌಲ್ಯ ನಿಗದಿಯಾಗುವುದು ಸರಕಾರಗಳ ನಿರ್ಣಯಗಳ ಮೇಲೆ. ಈ ಅಧಿಕಾರವನ್ನು ಸರಕಾರ ಸರಿಯಾಗಿ ನಿಭಾಯಿಸಿತು. ಪಾಕಿಸ್ತಾನದಿಂದ ವ್ಯಾಪಕವಾಗಿ ಹರಡುತ್ತಿದ್ದ ಕಳ್ಳನೋಟುಗಳ ಸಾಗಣೆ, ಡ್ರಗ್ ಮಾಫಿಯಾ ಹಾಗೂ ಹವಾಲಾ ಹಣವನ್ನು ನಿಯಂತ್ರಿಸಲು ಮತ್ತು ಈ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟಲು ಅಪನಗದೀಕರಣ ಕ್ರಮವು ಸೂಕ್ತವಾಗಿ ಬಳಕೆಯಾಯಿತು.

ದುಡ್ಡೆಂಬುದು ಯಾರ ಸ್ವತ್ತೂ ಅಲ್ಲ. ಅದು ವ್ಯವಹಾರಕ್ಕಿರುವ ಒಂದು ಮಾಧ್ಯಮವಷ್ಟೇ. ಆದರೆ ನಮ್ಮಲ್ಲಿ ಸಾರ್ವಜನಿಕ ಹಣವನ್ನೂ ಸ್ವಂತ ಸ್ವತ್ತಿನಂತೆ ಬಳಸಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಾಗೂ ಜನರ ಹಣವನ್ನು ಸೂಕ್ತವಾಗಿ ಜನರಿಗೆ ತಲುಪಿಸುವಂತೆ ಮಾಡಲು ಈ ಕ್ರಮವನ್ನು ಜಾರಿಗೊಳಿಸಲಾಯಿತು. ಇಂದು ಜಗತ್ತಿನ ಸುಧಾರಿತ ಅರ್ಥವ್ಯವಸ್ಥೆಗಳನ್ನು ಗಮನಿಸಿದಾಗ ಅಲ್ಲಿ ನಗದು ರಹಿತ ವಹಿವಾಟು ಪ್ರಮುಖವಾಗಿದೆ. ಈ ಮೂಲಕ ಅಲ್ಲಿ ಭ್ರಷ್ಟಾಚಾರ ರಹಿತ, ಸ್ವಚ್ಛ ಆಡಳಿತ ಕಾಣಬಹುದಾಗಿದೆ. ಭಾರತದಲ್ಲಿ ಕೂಡ ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಈ ಕ್ರಮವನ್ನು ಜಾರಿಗೊಳಿಸಲಾಯಿತು ಎಂದು ನೋಟು ಅಮಾನ್ಯೀಕರಣದ ಹಿಂದಿನ ಉದ್ದೇಶವನ್ನು ಅನಿಲ್ ಬೋಕಿಲ್ ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಬಳಿಕ ಸಂವಾದ ನಡೆಯಿತು. ಅಪನಗದೀಕರಣದ ಪರಿಣಾಮಗಳು, ಜಿಡಿಪಿ, ಡಿಜಿಟಲ್ ಬ್ಯಾಂಕಿಂಗ್, ನಗದುರಹಿತ ವ್ಯವಹಾರಗಳ ಬಗ್ಗೆ ಚರ್ಚೆ ನಡೆಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಉಪನ್ಯಾಸಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News