‘‘ನನ್ನ ಪತಿ ಸುರಕ್ಷಿತವಾಗಿ ಭಾರತಕ್ಕೆ ಬರಲು ಸಹಕರಿಸಿ’’

Update: 2017-03-22 08:02 GMT

* ಮಂಗಳೂರಿಗೆ ಆಗಮಿಸಿದ ಪತ್ನಿ- ಮಕ್ಕಳು
ಮಂಗಳೂರು, ಮಾ. 22: ‘‘ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದ್ದ ನಾನು ಹಾಗೂ ಮೂವರು ಮಕ್ಕಳು ಪತಿಯ ತವರೂರಾದ ದಕ್ಷಿಣ ಕನ್ನಡದ ಬೆಳ್ತಂಗಡಿಗೆ ಬಂದಿದ್ದೇವೆ. ಇದೀಗ ನನ್ನ ಪತಿಯನ್ನೂ ಸುರಕ್ಷಿತವಾಗಿ ಕರೆತರಲು ಸಹಕರಿಸಿ’’ ಎಂದು ದಕ್ಷಿಣ ಆಫ್ರಿಕಾದ ಉಗಾಂಡದಲ್ಲಿ ಸಂಕಷ್ಟದಲ್ಲಿರುವ ಬೆಳ್ತಂಗಡಿಯ ಪಣಕಜೆ ನಿವಾಸಿ ಅಬ್ದುಲ್ ರಶೀದ್‌ರವರ ಪತ್ನಿ ಮಿಹಿಂ ಇಬ್ರಾಹೀಂ ದಾಹಿರ್ ಸಹೃದಯಿಗಳಿಗೆ ಮನವಿ ಮಾಡಿದ್ದಾರೆ.

‘‘ಸುಮಾರು 10 ತಿಂಗಳ ಹಿಂದೆ ಉಗಾಂಡದಲ್ಲಿ ನಡೆದ ದರೋಡೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ನನ್ನ ಪತಿಯನ್ನು ಜೈಲಿಗೆ ಮೂರು ತಿಂಗಳು ಜೈಲಿಗೆ ಹಾಕಿದ್ದಾಗ ನಾನು ಮತ್ತು ನನ್ನ ಮಕ್ಕಳು ಅಸಹಾಯಕರಾಗಿದ್ದೇವು. ಆ ಸಂದರ್ಭದಲ್ಲಿ ಉಗಾಂಡದಲ್ಲಿನ ನಮ್ಮ ನೆರೆಯವರು ಹಾಗೂ ಅಲ್ಲಿನ ಮಸೀದಿಯವರು ನಮಗೆ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆ ತೋರಿದ್ದರು. ಆ ಬಳಿಕ ನನ್ನ ಪತಿಯನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡಿಸುವಲ್ಲಿ, ಬಳಿಕ ನಮಗೆ ಆಹಾರದ ವ್ಯವಸ್ಥೆ ಮಾಡಿಸುವಲ್ಲಿ ಹಾಗೂ ಇದೀಗ ನಮ್ಮನ್ನು ಉಗಾಂಡದಿಂದ ನನ್ನ ಪತಿಯ ಊರಿಗೆ ಕರೆತರುವಲ್ಲಿ ಎಂ. ಫ್ರೆಂಡ್ಸ್ ತಂಡದವರು ಸಹಕರಿಸಿದ್ದಾರೆ. ಈಗ ಉಗಾಂಡದಲ್ಲಿರುವ ನನ್ನ ಪತಿಯನ್ನು ಇಲ್ಲಿಗೆ ಕರೆಸುವಲ್ಲಿ ಸಹಕರಿಸಬೇಕು’’ ಎಂದು ಅವರು ಎಂ.ಫ್ರೆಂಡ್ಸ್‌ನವರು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡರು.

ಎಂ. ಫ್ರೆಂಡ್ಸ್ ಸದಸ್ಯರ ಸಹಕಾರದೊಂದಿಗೆ ಮೂವರು ಪುಟ್ಟ ಮಕ್ಕಳ ಜತೆ ಮಿಹಿಂರವರು ಮಾ.20ರಂದು ದಕ್ಷಿಣ ಆಫ್ರಿಕಾದ ಉಗಾಂಡದಿಂದ ವಿಮಾನದಲ್ಲಿ ಮುಂಬೈಗೆ ಆಗಮಿಸಿ, ಅಲ್ಲಿಂದ ರೈಲಿನ ಮೂಲಕ ಇಂದು ಬೆಳಗ್ಗೆ ಮಂಗಳೂರು ತಲುಪಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿರುವ ಮಿಹಿಂ ಹಾಗೂ ಅವರ ಮಕ್ಕಳು ತೀರಾ ಬಳಲಿದ್ದರು.

ಗಂಜಿಯಾದರೂ ಸರಿ ಅವನಿಲ್ಲೇ ಇರಲಿ

‘‘ನನ್ನ ಮಗ ಒಮ್ಮೆ ಸುರಕ್ಷಿತವಾಗಿ ಹಿಂದಿರುಗಲಿ ಬರುವಲ್ಲಿ ಕೇಂದ್ರ ಸರಕಾರ ಹಾಗೂ ಹೃದಯವಂತರು ಸಹಕರಿಸಬೇಕೆಂದು ನಾನು ಬೇಡಿಕೊಳ್ಳುತ್ತಿದ್ದೇನೆ. ಅವನಿಲ್ಲಿಗೆ ವಾಪಾಸಾದರೆ ಮತ್ತೆ ಆತನನ್ನು ಕಳುಹಿಸುವುದಿಲ್ಲ. ಗಂಜಿ ಕುಡಿದಾದರೂ ಬದುಕುತ್ತೇವೆ’’ ಎನ್ನುತ್ತಾರೆ ರಶೀದ್ ಶಾಪಿ ತಂದೆ ಜಿ.ಮುಹಮ್ಮದ್ ಶಾಫಿ.

ಭಾರತ್ ಬೀಡಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮುಹಮ್ಮದ್ ಶಾಫಿ ಪ್ರಸ್ತುತ ನಿವೃತ್ತರಾಗಿ, ಬೆಳ್ತಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆ ವಾಸವಾಗಿದ್ದಾರೆ.

‘‘ಮಗ ದರೋಡೆ ಪ್ರಕರಣ ನಡೆದ ಬಗ್ಗೆ ನನಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದ. ಕಂಪನಿಯವರು ನನ್ನ ಮೇಲೆ ದೂರು ನೀಡಿರುವ ಬಗ್ಗೆಯೂ ಹೇಳಿದ್ದ. ಆ ಸಂದರ್ಭ ನಾನು ಎಂ. ಫ್ರೆಂಡ್ಸ್‌ನ ಸದಸ್ಯ ಹಾಗೂ ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಹುಲ್ ಹಮೀದ್‌ರವರಿಗೆ ಈ ಬಗ್ಗೆ ತಿಳಿಸಿ ಸಹಾಯ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ನನ್ನ ಮಗ ಜೈಲಿನಿಂದ ಬಿಡುಗಡೆ ಹೊಂದಿದ್ದು, ಸೊಸೆ ಮತ್ತು ಮಕ್ಕಳು ಇಂದು ಮಂಗಳೂರಿಗೆ ಬರುವಂತಾಗಿದೆ’’ ಎಂದು ಹೇಳಿದರು.

‘‘ನನ್ನ ಏಳು ಮಂದಿ ಮಕ್ಕಳಲ್ಲಿ (ನಾಲ್ವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು) ರಶೀದ್ ಶಾಫಿ ಹಿರಿಯವ. ಕಳೆದ ಎಂಟು ವರ್ಷಗಳಿಂದ ಆತ ಉಗಾಂಡದಲ್ಲಿ ಗುಜರಾತ್ ಮೂಲದ ವ್ಯಕ್ತಿಯೊಬ್ಬರ ಇಲೆಕ್ಟ್ರಾನಿಕ್ಸ್ ಕಂಪೆನಿಯೊಂದರಲ್ಲಿ ದ್ಯೋಗದಲ್ಲಿದ್ದರು. ಅಲ್ಲಿ ಸೋಮಾಲಿಯಾದ ಪ್ರಜೆಯಾದ ಮಿಹಿಂರನ್ನು ವಿವಾಹವಾಗಿ ಅವರಿಗೆ ಐದು, ಮೂರು ಹಾಗೂ ಒಂದು ವರ್ಷದ ಮೂವರು ಮಕ್ಕಳಿದ್ದಾರೆ. ಉಗಾಂಡಾದ ಕಂಪಾಲಾ ಸಮೀಪದ ನಮೂವೋಂಗೋದಲ್ಲಿ ವಾಸಿಸುತ್ತಿದ್ದ ರಶೀದ್ ಶಾಪಿ 10 ತಿಂಗಳ ಹಿಂದೆ ಕೆಲಸದಲ್ಲಿದ್ದ ಕಂಪನಿ ಕಚೇರಿಗೆ ಬೀಗ ಹಾಕಿ ಕಂಪನಿಯ ಹಣದೊಂದಿಗೆ (12 ಲಕ್ಷ ರೂ.) ಮನೆಗೆ ಹಿಂತಿರುಗುತ್ತಿದ್ದಾಗ ಅವರಿಗೆ ಹಲ್ಲೆ ನಡೆಸಿ ದರೋಡೆ ಮಾಡಲಾಗಿತ್ತು. ಈ ಬಗ್ಗೆ ಆತ ಉಗಾಂಡದಲ್ಲಿ ದೂರನ್ನೂ ನೀಡಿದ್ದಾನೆ. ಆದರೆ ಇದೇ ವೇಳೆ ಕಂಪನಿಯವರು ಮಗನ ವಿರುದ್ದವೇ ದೂರು ನೀಡಿದ್ದರು. ಅದರಿಂದಾಗಿ ಆತ ಮೂರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು’’ ಎಂದು ಮುಹಮ್ಮದ್ ಶಾಫಿ ಬೇಸರ ತೋಡಿಕೊಂಡರು.

‘‘ನಮಗೆ ಸುಮರು ಎಂಟು ತಿಂಗಳ ಹಿಂದೆ ಮುಹಮ್ಮದ್ ಶಾಫಿಯವರು ಘಟನೆ ಬಗ್ಗೆ ತಿಳಿಸಿದ್ದರು. ಆ ಸಂದರ್ಭ ಉಗಾಂಡದಲ್ಲಿ ಮಂಗಳೂರು ಮೂಲದವರು ಯಾರಾದರೂ ಇದ್ದಾರೆಯೇ ಎಂಬುದನ್ನು ತಿಳಿಯುವ ಯತ್ನ ಮಾಡಿದೆವು. ಬಳಿಕ ಆಹಾರ ಸಚಿವ ಯು.ಟಿ.ಖಾದರ್ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಪತ್ರ ಬರೆಯಲಾಯಿತು. ಅದಕ್ಕೆ ಸ್ಪಂದನೆ ಸಿಗದ ಕಾರಣ ಸುಷ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದಾಗ ಅವರು ಪ್ರತಿಕ್ರಿಯಿಸಿ ಉಗಾಂಡದ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಸೂಚಿಸಿದ್ದರು. ಆದರೆ ಅಲ್ಲಿರುವ ರಾಯಭಾರಿ ಕಚೇರಿ ಸಿಬ್ಬಂದಿಯಿಂದ ಸಹಕಾರ ಸಿಗಲಿಲ್ಲ. ಪ್ರಕರಣದ ಕುರಿತಂತೆ ಆರಂಭದಲ್ಲಿ ನಾವೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಮಗೂ ಸಂಶಯವಿತ್ತು. ಬಳಿಕ ನಮ್ಮ ಸ್ನೇಹಿತರನ್ನು ಕಳುಹಿಸಿ ಅಲ್ಲಿ ವಿಚಾರಿಸಿದಾಗ ರಶೀದ್ ಶಾಫಿ ಹಾಗೂ ಕುಟುಂಬ ಸಂಕಷ್ಟದಲ್ಲಿರುವುದು ಅರಿವಾಗಿ ಸಹಕಾರ ನೀಡಿದ್ದೇವೆ’’ ಎಂದು ಎಂ. ಫ್ರೆಂಡ್ಸ್‌ನ ಕಾರ್ಯದರ್ಶಿ ರಶೀದ್ ವಿಟ್ಲ ತಿಳಿಸಿದರು.

‘‘ಪ್ರಕರಣದಿಂದಾಗಿ ರಶೀದ್ ಶಾಫಿಯವರು ಈಗಾಗಲೆ ಮಾನಸಿಕವಾಗಿ ನೊಂದಿದ್ದಾರೆ. ಉಗಾಂಡದಿಂದ ರಶೀದ್‌ರವರ ಪತ್ನಿ ಹಾಗೂ ಮಕ್ಕಳನ್ನು ಭಾರತಕ್ಕೆ ಕರೆತರಲು ಅಗತ್ಯವಾದ ಅವರ ದಾಖಲೆ ಪತ್ರಗಳನ್ನು ಸರಿಪಡಿಸಲು ಅನಿವಾಸಿ ಬಾರತೀಯರಾದ ಹನೀಫ್ ಪುತ್ತೂರು (ಅಬುದಾಬಿ) ಹಾಗೂ ಮೊಹ್ಸಿನ್ ಸಹಕರಿಸಿದಾದರೆ. ಮುಂಬೈನಿಂದ ರಶೀದ್ ಶಾಫಿಯವರ ಕುಟುಂಬವನ್ನು ಎಂ. ಫ್ರೆಂಡ್ಸ್ ಸದಸ್ಯ ಅನ್ಸಾರ್ ಬೆಳ್ಳಾರೆ ರೈಲು ಮೂಲಕ ಮಂಗಳೂರಿಗೆ ಕರೆತಂದಿದ್ದಾರೆ. ಇವರ ವೀಸಾ ದಾಖಲೆ ಪತ್ರ, ಟಿಕೆಟ್ ವ್ಯವಸ್ಥೆ, ರೇಶನ್ ವ್ಯವಸ್ಥೆ, ಉಗಾಂಡದ ಬಾಡಿಗೆ ಮನೆಯ ವ್ಯವಸ್ಥೆಯನ್ನು ದಾನಿಗಳ ಮೂಲಕ ಎಂ. ಫ್ರೆಂಡ್ಸ್ ವ್ಯವಸ್ಥೆ ಮಾಡಿದೆ’’ ಎಂದು ರಶೀದ್ ವಿಟ್ಲ ವಿವರಿಸಿದರು.

‘ಅಪರೇಶನ್ ಉಗಾಂಡ’ ಆಂದೋಲನ

‘‘ಇದೀಗ ರಶೀದ್ ಶಾಫಿ ಜೈಲಿನಿಂದ ಬಿಡುಗಡೆಗೊಂಡಿದ್ದರೂ, ಅವರು ಕೆಲಸ ಮಾಡುವಂತಿಲ್ಲ. ಬದಲಾಗಿ ಅವರು ನ್ಯಾಯಾಲಯಕ್ಕೆ ಸುಮಾರು 12 ಲಕ್ಷ ರೂ. ಕಟ್ಟಬೇಕಿದೆ. ಆ ಹಣ ಪಾವತಿಯಾದರೆ ಮಾತ್ರವೇ ಅವರ ಪಾಸ್‌ಪೋರ್ಟ್ ದೊರಕಿ, ಅವರು ಭಾರತಕ್ಕೆ ಮರಳಲು ಸಾಧ್ಯವಾಗಲಿದೆ ಇದಕ್ಕಾಗಿ ಎಂ. ಫ್ರೆಂಡ್ಸ್ ಮೂಲಕ ಅಪರೇಶನ್ ಉಗಾಂಡ ಎಂಬ ಹೆಸರಿನಲ್ಲಿ ಆಂದೋಲನ ಆರಂಭಿಸಲಾಗುತ್ತಿದೆ. ಎಪ್ರಿಲ್ 5ರಂದು ಉಗಾಂಡದಲ್ಲಿ ಮತ್ತೆ ರಶೀದ್‌ರವರ ಪ್ರಕರಣ ವಿಚಾರಣೆಯಾಗಲಿದ್ದು, ಆ ಸಂದರ್ಭ ಕೋರ್ಟ್‌ಗೆ ಹಣ ಪಾವತಿಸಬೇಕಾಗಿದೆ. ಇದಕ್ಕೆ ಕೇಂದ್ರ ಸರಕಾರದ ನೆರವನ್ನು ಎದುರು ನೋಡಲಾಗುತ್ತಿದೆ. ಜತೆಗೆ ಸಹೃದಯಿಗಳೂ ಸಹಕರಿಸಬೇಕು’’ ಎಂದು ಕೆ.ಕೆ. ಶಾಹುಲ್ ಹಮೀದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಶೀದ್ ಶಾಫಿಯವರ ಮಕ್ಕಳಾದ ಶಾಫಿ ಇಬ್ರಾಹೀಂ, ಶಾಫಿ ಸುಲ್ತಾನ ಹಾಗೂ ಶಾಫಿ ಸಪ್ನಾ ಮತ್ತು ಎಂ. ಫೆಂಡ್ಸ್‌ನ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕೋಶಾಧಿಕಾರಿ ಸುಜಾಜ್ ಮುಹಮ್ಮದ್, ಟ್ರಸ್ಟಿಗಳಾದ ಆಶಿಕ್ ಕುಕ್ಕಾಜೆ, ಆರಿಫ್ ಬೆಳ್ಳಾರೆ, ಅನ್ಸಾರ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News