ನಮ್ಮ ಬಗ್ಗೆ ಅರಿತು ಸಮಾಜಕ್ಕೆ ತಿಳಿಸಿ: ವಿದ್ಯಾರ್ಥಿಗಳಿಗೆ ಮಂಗಳಮುಖಿಯ ಕರೆ

Update: 2017-03-22 10:17 GMT

ಮಂಗಳೂರು, ಮಾ. 22: ನಾವು ನಿಮ್ಮಂತೆಯೇ ಮಾನವರು. ನಮಗೂ ನಿಮ್ಮಂತೆ ಬದುಕಬೇಕೆಂಬ ಹಂಬಲವಿದೆ. ಅದಕ್ಕಾಗಿ ವಿದ್ಯಾರ್ಥಿಗಳಾದ ನೀವು ನಮ್ಮ ಬಗ್ಗೆ ಅರಿತುಕೊಂಡು ಅದನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಿದಾಗ ಸಮಾಜದಲ್ಲಿ ನಮ್ಮ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು ದೂರವಾಗಲಿದೆ’’.

ಇದು ಮಂಗಳಮುಖಿ ಸಂಜನಾ ಮಾಡಿಕೊಂಡ ಮನವಿ. ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ಕೂಲ್ ಆ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜಿನ ಬಿಎಸ್‌ಡಬ್ಲು ಸಹಯೋಗ ವೇದಿಕೆ ವತಿಯಿಂದ ಕಾಲೇಜಿನ ಮರಿಯಾ ಪೈವಾ ಕೊಸೆರೋ ಸಭಾಂಗಣದಲ್ಲಿ ಬುಧವಾರ ನಡೆದ ‘ಮಂಗಳಮುಖಿಯರ ದಿನಾಚರಣೆಯಲ್ಲಿ ಅನಿಸಿಕೆ ವ್ಯಕ್ತಪಡಿಸುತ್ತಾ ಅವರು ಮಾಡಿದರು.

ಮಂಗಳಮುಖಿಯರಾದ ನಮಗೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್‌ನಿಂದ ಹಲವು ಸೌಲಭ್ಯಗಳು ದೊರೆಯುತ್ತಿದೆ. ಜೊತೆಗೆ ನಾಯಕರೆನಿಸಿಕೊಂಡವರ ದಬ್ಬಾಳಿಕೆಯಿಂದ ಮುಕ್ತವಾಗಿ ಬದುಕಲು ಅವಕಾಶ ದೊರಕಿದೆ ಎಂದು ಟ್ರಸ್ಟ್‌ನ ಕೋಶಾಧಿಕಾರಿ ಶ್ರೀನಿಧಿ ಕಾರ್ಯಕ್ರಮದಲ್ಲಿ ಅಭಿಪ್ರಾಯಿಸಿದರು.

ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ‘ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಲ್ಪಟ್ಟು ಬಂಧನದ ಸ್ಥಿತಿಯಲ್ಲಿದ್ದ ಯುವತಿಯೊಬ್ಬರನ್ನು ಬಂಧ ಮುಕ್ತ’’ಗೊಳಿಸುವ ಮೂಲಕ ವಿಶೇಷ ರೀತಿಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ಕಾಲೇಜಿನ ಉಪ ಪ್ರಾಂಶುಪಾಲೆ ಡೆನ್ನಿಸ್ ಮೇರಿ, ರಿಜಿಸ್ಟ್ರಾರ್ ಡಾ.ಲಕ್ಷ್ಮೀ ನಾರಾಯಣ ಭಟ್, ಸಹಯೋಗದ ಸಂಯೋಜಕಿ ಅನುಸೂಯಾ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಪರಿವರ್ತನಾ ಟ್ರಸ್ಟ್‌ನ ಸಂಸ್ಥಾಪಕಿ ವಾಯ್ಲೆಟ್ ಪಿರೇರ, ಟ್ರಸ್ಟ್ ಆರಂಭಿಸಿದ ಕಾರಣವನ್ನು ತಿಳಿಸುತ್ತಾ, ಮಂಗಳಮುಖಿಯರಿಗೆ ನೆರವಿನ ಹಸ್ತ ನೀಡಲು ಬಯಸುವವರು ಸಂಘಟನೆಯ ಸದಸ್ಯರಾಗಬಹುದು ಎಂದರು.

ಉದ್ಘಾಟನಾ ಸಮಾರಂಭದ ಬಳಿಕ ಮಂಗಳಮುಖಿಯರ ಜತೆ ಕಾಲೇಜಿನ ವಿದ್ಯಾರ್ಥಿಗಳು ಸಂವಾದ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News