×
Ad

ದಿನಕರನ್ ಉಮೇದುವಾರಿಕೆ ಪ್ರಶ್ನಿಸಿದ್ದ ಅರ್ಜಿ ಉಚ್ಚ ನ್ಯಾಯಾಲಯದಿಂದ ವಿಲೇವಾರಿ

Update: 2017-03-22 16:02 IST

ಚೆನ್ನೈ,ಮಾ.22: ಸರಕಾರದ ನೀತಿ ವಿಷಯಗಳಲ್ಲಿ ತಾನು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿದ ಚೆನ್ನೈ ಉಚ್ಚ ನ್ಯಾಯಾಲಯವು, ಫೆರಾ ಪ್ರಕರಣಗಳಲ್ಲಿ ದಂಡನೆಗೊಳಗಾಗಿರುವ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು ಎ.12ರಂದು ನಡೆಯಲಿರುವ ಇಲ್ಲಿಯ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿತು.

 ಚೆನ್ನೈ ನಿವಾಸಿ ಪಿ.ಎ.ಜೋಸೆಫ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ ಮತ್ತು ನ್ಯಾ.ಆರ್‌ಎಂಟಿ ಟೀಕಾ ರಮಣ್ ಅವರನ್ನೊಳಗೊಂಡ ಪೀಠದ ಮುಂದೆ ಬಂದಿದ್ದು, ಪರಿಹಾರ ಕೋರಿ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅದು ಅರ್ಜಿದಾರರಿಗೆ ಸೂಚಿಸಿತು.

 28 ಕೋ.ರೂ.ದಂಡ ಹೇರಿದ್ದು ಸೇರಿದಂತೆ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ(ಫೆರಾ)ಯಡಿ ದಿನಕರನ್ ವಿರುದ್ಧದ ಪ್ರಕರಣಗಳನ್ನು ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದ ಜೋಸೆಫ್,ಜೈಲುಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಿರುವ ಜನತಾ ಪ್ರಾತಿನಿಧ್ಯ ಕಾಯ್ದೆಯ 8(1)(ಸಿ) ಮತ್ತು 8(1)(ಇ) ಕಲಮ್‌ಗಳನ್ನು ಪ್ರಶ್ನಿಸಿದ್ದರು ಮತ್ತು ಕ್ರಿಮಿನಲ್ ದೋಷನಿರ್ಣಯದ ಪ್ರಕರಣಗಳಿಗೆ ಮಾತ್ರ ಅನರ್ಹತೆಯನ್ನು ಸೀಮಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಈ ಕಲಮ್ ಗಳನ್ನು ‘ಅಕ್ರಮ ಮತ್ತು ಸಂವಿಧಾನಬಾಹಿರ ’ಎಂದು ಘೋಷಿಸುವಂತೆ ನ್ಯಾಯಾಲಯ ವನ್ನು ಕೋರಿದ್ದರು.

ಅರ್ಜಿಯನ್ನು ವಿಲೇವಾರಿಗೊಳಿಸಿದ ಪೀಠವು, ಸರಕಾರದ ನೀತಿ ವಿಷಯಗಳಲ್ಲಿ ತಾನು ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ಅದು ಸಂಪೂರ್ಣವಾಗಿ ಕಾರ್ಯಾಂಗದ ವ್ಯಾಪ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News