ಜನರಲ್ಲಿ ಜಲಜಾಗೃತಿ ಅಗತ್ಯ: ಲತಾ
ಉಡುಪಿ, ಮಾ.22: ನಗರೀಕರಣ, ಕೈಗಾರಿಕೆಗಳ ವಿಸ್ತರಣೆ, ನೀರಿನ ದುರ್ಬಳಕೆಯಿಂದ ನಮ್ಮ ಜಲಮೂಲಗಳು ನಾಶವಾಗುತ್ತಿದ್ದು, ನೀರು ಅಮೂಲ್ಯ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪಾ್ರಧಿಕಾರದ ಅಧ್ಯಕ್ಷೆ ಲತಾ ಹೇಳಿದ್ದಾರೆ.
ಬುಧವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಪೂರ್ಣಪ್ರಜ್ಞ ಪ್ರಥಮ ದರ್ಜೆ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ವಿಶ್ವ ಜಲ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಹಿರಿಯರು ನೀರನ್ನು ಬಳಸುತ್ತಿದ್ದ ರೀತಿ, ಜಲಮೂಲದ ಉಳಿಯುವಿಕೆಗೆ ಪೂರಕವಾಗಿತ್ತು. ಭೂಮಿ ಮೇಲಿನ ಎಲ್ಲಾ ಜೀವಜಾಲಗಳಿಗೆ ನೀರಿನ ಅಗತ್ಯವನ್ನು ಅರಿತು ನೀರನ್ನು ಬಳಸುತಿದ್ದರಲ್ಲದೇ, ಮುಂದಿನ ಜನಾಂಗಕ್ಕೂ ಜೀವಜಲವನ್ನು ಉಳಿಸಲು ವಿಶೇಷ ಮುತುವರ್ಜಿ ವಹಿಸಿದ್ದರು ಎಂದರು.
ನೀರಿನ ಮಿತ ಬಳಕೆ, ಜಲಮರುಪೂರಣ, ಮಳೆನೀರಿನ ಕೊಯ್ಲು ಮಹತ್ವದ ಕುರಿತು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಆಯುಕ್ತ ಡಿ.ಮಂಜುನಾಥಯ್ಯ, ವಕೀಲರ ಸಂಘದ ಅಧ್ಯಕ್ಷ ದಯಾನಂದ ಕೆ., ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ಪಾಲ್ಗೊಂಡಿದ್ದರು. ನಗರಸಭೆ ಪರಿಸರ ಇಂಜಿನಿಯರ್ ರಾಘವೇಂದ್ರ ಉಡುಪಿಯ ನೀರಿನ ಮೂಲಗಳು ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡಿದರು.