×
Ad

ರಾಜ್ಯ ರಸ್ತೆ ಅಗಲೀಕರಣಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

Update: 2017-03-22 19:53 IST

ಕಡಬ, ಮಾ.22. ಸುಬ್ರಹ್ಮಣ್ಯ - ಧರ್ಮಸ್ಥಳ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಪರ್ಕಿಸುವ ಜಂಕ್ಷನ್ ಪೆರಿಯಶಾಂತಿಯಿಂದ 2 ಕಿ.ಮೀ ಕಾಯರಡ್ಕವರೆಗೆ ಮರಗಳಿಂದ ಕೂಡಿದ್ದು ರಸ್ತೆ ಕಿರಿದಾಗಿದ್ದು ನಿರಂತರ ಅಪಘಾತಗಳು ಸಂಭವಿಸುತ್ತಿರುವುದರಿಂದ ಕೂಡಲೇ ರಸ್ತೆ ಇಕ್ಕಡೆಗಳಲ್ಲಿರುವ ಮರಗಿಡಗಳನ್ನು ತೆರವುಗೊಳಿಸಿ ರಾಜ್ಯಹೆದ್ದಾರಿಯನ್ನು ಅಗಲೀಕರಣಗೊಳಿಸಿ ಸಂಪರ್ಕಕ್ಕೆ ಯೋಗ್ಯ ರಸ್ತೆಯನ್ನಾಗಿಸಬೇಕೆಂದು ಆಗ್ರಹಿಸಿ ಇಚಿಲಂಪಾಡಿಯ ನೇರ್ಲದಲ್ಲಿ ಬುಧವಾರದಂದು ನೀತಿ ತಂಡ ಮತ್ತು ಇತರ ಸಂಘಟನೆಗಳ ವತಿಯಿಂದ ರಸ್ತೆ ತಡೆದು ಪ್ರತಿಭಟಿಸಿದ್ದು ಪಿಡಬ್ಲ್ಯುಡಿ ಹಾಗೂ ಅರಣ್ಯ ಇಲಾಖೆಯವರ ಭರವಸೆಯಂತೆ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ ನೀತಿ ತಂಡದ ಟ್ರಸ್ಟ್ ಅಧ್ಯಕ್ಷ ಜಯನ್ ಟಿ. ಮಾತನಾಡಿ, ಇಚಿಲಂಪಾಡಿ ಗ್ರಾಮದ ಕಾಯರಡ್ಕದಿಂದ ಪೆರಿಯಶಾಂತಿವರೆಗಿನ ಕೇವಲ 2 ಕಿ.ಮೀ ರಾಜ್ಯ ಹೆದ್ದಾರಿ ಅಗಲ ಕಿರಿದಾಗಿದ್ದು ಯಾವುದೇ ದೊಡ್ಡ ವಾಹನಗಳಿಗೆ ಓಡಾಟ ನಡೆಸಲು ಸಾಧ್ಯವಾಗದೆ ಇತರ ವಾಹನಗಳಿಗೆ ಸೈಡ್ ಕೊಡಲು ಸಾಧ್ಯವಾಗದೆ ಅದೆಷ್ಟೋ ವಾಹನಗಳು ಅಪಘಾತಕ್ಕೀಡಾಗಿ ಹಲವು ಜನರಿಗೆ ಗಾಯಗಳಾಗಿದ್ದು 7 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಅದೆಷ್ಟೋ ಮಂದಿ ಕೈಕಾಲುಗಳನ್ನು ಕಳೆದುಕೊಂಡಿದ್ದಲ್ಲದೆ ಬೇರೆ ಬೇರೆ ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ.

2005 ರಿಂದ 11 ರವರೆಗೆ ಸುಮಾರು 58 ಅಪಘಾತಗಳು ಸಂಭವಿಸಿದ್ದು ಎಷ್ಟೋ ಮಂದಿ ಇಂದಿಗೂ ದುಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ರಾಜ್ಯಾದ್ಯಂತ ಎಲ್ಲಾ ರಸ್ತೆಗಳು ಅಭಿವೃದ್ದಿಯಾಗುತ್ತಿದ್ದರೂ ನಮ್ಮಲ್ಲಿ 2 ಪುಣ್ಯ ಕ್ಷೇತ್ರಗಳಿಗೆ ಅದೆಷ್ಟೋ ರಾಜ್ಯಾದ್ಯಂತ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಯಾತ್ರಾರ್ಥಿಗಳು ಇದೇ ರಸ್ತೆ ಮೂಲಕ ಬರುತ್ತಿದ್ದು ಇಲ್ಲಿ ಈ ಅಗಲ ಕಿರಿದಾದ ರಸ್ತೆಯಲ್ಲಿ ಬರುವಾಗ ಅವರಿಗೆ ಗೋಚರಿಸದೆ ಅಪಘಾತಗಳು ಸಂಭವಿಸುತ್ತಲೇ ಇದೆ. ಈ ಬಗ್ಗೆ ಎಷ್ಟೇ ಮನವಿ ಮಾಡಿಕೊಂಡರೂ ಮಂತ್ರಿಗಳಾಗಲೀ, ಶಾಸಕರಾಗಲೀ, ಅಧಿಕಾರಿಗಳಾಗಲೀ ಎಚ್ಚರಗೊಂಡಿಲ್ಲ. ಇನ್ನು ಇಂತಹ ರಸ್ತೆ ತಡೆ, ಪ್ರತಿಭಟನೆಯೇ ನಮ್ಮ ಹೋರಾಟದ ಗುರಿಯಾಗಿದೆ.

ಈ ರಸ್ತೆಯ ಇಕ್ಕಡೆಗಳಲ್ಲಿರುವ ಮರಗಳನ್ನು ಕೂಡಲೇ ತೆರವುಗೊಳಿಸಿ ರಸ್ತೆ ಅಗಲೀಕರಣಗೊಳಿಸುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ, ಎಂದು ಅಪಘಾತದಲ್ಲಿ 2 ಕಾಲುಗಳನ್ನು ಕಳೆದುಕೊಂಡ ಬರೆಮೇಲು ಮೊನಪ್ಪ ಪೂಜಾರಿಯವರನ್ನು ಎದರು ಪ್ರದರ್ಶಿಸುತ್ತ ಪೆರಿಯಶಾಂತಿ-ಸುಬ್ರಹ್ಮಣ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು. ಕಡಬ ರೈಲ್ವೆ ಅಭಿವೃದ್ದಿ ಹೋರಾಟ ಸಮಿತಿ, ರಬ್ಬರ್ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ರಾಜ್ಯದಲ್ಲಿ ಕುಮಾರಸ್ವಾಮಿ ಸರಕಾರ ಇದ್ದಾಗ 7 ಕೋಟಿ 80 ಲಕ್ಷ ರೂ.ನಲ್ಲಿ ಇಚಿಲಂಪಾಡಿ ಸೇತುವೆ ಮಾಡಿ ರಸ್ತೆಯನ್ನು ಮೇಲ್ದರ್ಜೇಗೇರಿಸಿ ಅಭಿವೃದ್ದಿ ಪಡಿಸಲಾಗಿದ್ದಲ್ಲದೆ ಗುಂಡ್ಯ ಸುಬ್ರಹ್ಮಣ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿಸಿ ರಸ್ತೆಯ ಇಕ್ಕಡೆಗಳ ಸಂಪೂರ್ಣ ಮರಗಳನ್ನು ತೆರವುಗೊಳಿಸಿ 21 ಕಿ.ಮೀ ಉದ್ದದ ಗುಂಡ್ಯ ಸುಬ್ರಹ್ಮಣ್ಯ ಹೆದ್ದಾರಿಯನ್ನು ಮಾಡಲಾಗಿದ್ದಾರೆ.

ಈಗಿನ ಕಾಂಗ್ರೆಸ್ ಸರಕಾರವಿದ್ದರೂ ಇಲ್ಲಿ ನಮ್ಮ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳು, ಅರಣ್ಯ ಮಂತ್ರಿಗಳು ಆಗಿದ್ದರೂ ಇಲ್ಲಿ ಬರೇ 2 ಕಿ.ಮೀ ದೂರ ಕಿರಿದಾದ ರಸ್ತೆಯನ್ನು ಅಗಲೀಕರಣಗೊಳಿಸಿ ಅಲ್ಲಿಯ ಮರಗಳನ್ನು ತೆರವುಗೊಳಿಸಲು ಸಾಧ್ಯವಾಗದಿದ್ದರೆ ಇನ್ನು ಇವರಿಂದ ಏನು ಅಭಿವೃದ್ದಿ ಕಾರ್ಯ ನಿರೀಕ್ಷಿಸಬಹುದೆಂದು ದೂರಿದ ಮೀರಾ ಸಾಹೇಬ್ ಜಿಲ್ಲಾ ಮಂತ್ರಿಗಳು, ಶಾಸಕರೂ, ಜಿ.ಪಂ.ತಾಲೂಕು ಪಂಚಾಯತ್ ಸದಸ್ಯರೆಲ್ಲರೂ ರಾಜೀನಾಮೆ ನೀಡಿ ಹೋರಾಟಕ್ಕಿಲಿಯಲಿ ಎಂದು ಆಗ್ರಹಿಸಿದ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡಬೇಕಾದರೂ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇರಬೇಕು.

ನಾನು ಈ ಭಾಗದ ಪ್ರಥಮ ಜಿ. ಪರಿಷತ್ ಸದಸ್ಯನಾಗಿದ್ದು ಸಭಾಪತಿಯಾಗಿದ್ದು ಅದೆಷ್ಟೋ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಈಗಲೂ ಜನರು ನೆನಪಿಡುವಂತಾಗಿದೆ. ಆದರೆ ಇಂದು ಬೇಕಾದಷ್ಟು ಅನುದಾನಗಳು ಇದ್ದರೂ ಇಚ್ಚಾಶಕ್ತಿಯಿಲ್ಲದೆ ಅಭಿವೃದ್ದಿಗಳು ಕುಂಠಿತವಾಗುತ್ತಿದೆ ಎಂದು ದೂರಿದರು.

 ಈ ಸಂದರ್ಭದಲ್ಲಿ ನೀತಿ ಟ್ರಸ್ಟ್‌ನ ಕಾರ್ಯದರ್ಶಿ ಮೇಹಿ ಜೋರ್ಜ್, ಇಚಿಲಂಪಾಡಿ ಸಂತ ಜಾರ್ಜ್ ಆರ್ಥೋಡೋಕ್ಸ್ ಸಿರಿಯನ್ ಚರ್ಚ್‌ನ ಟ್ರಸ್ಟಿ ಜಿ.ತೋಮಸ್, ಜಿ.ಪಂ.ಸದಸ್ಯರಾದ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಕೆ.ಟಿ ವಲ್ಸಮ್ಮ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಇಬ್ರಾಹಿಂ ಮೊದಲಾದವರು ಮಾತನಾಡಿದರು. ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದ ಪಿಡಬ್ಲ್ಯುಡಿ ಇಲಾಖಾ ಸಹಾಯಕ ಅಭಿಯಂತರರಾದ ಗೋಕುಲ್‌ದಾಸ್‌ರವರು ರಸ್ತೆ ಅಭಿವೃದ್ದಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಈ ರಸ್ತೆ ಅಭಿವೃದ್ಧಿ ಬಗ್ಗೆ ಸರಕಾರ ಅನುದಾನ ಮಂಜೂರುಗೋಲಿಸಿ 3 ವರ್ಷಗಳಾಗಿದ್ದು ಇನ್ನೂ 2 ವರ್ಷಗಳ ಬಳಿಕವೆ ಮುಂದಿನ ಅಭಿವೃದ್ಧಿ ನಡೆಸಲಾಗುತ್ತಿದೆ ಎಂದ ಅವರು ಕೂಡಲೆ ತಮ್ಮ ಬೇಡಿಕೆಯನ್ನು ಆನ್‌ಲೈನ್ ಮೂಲಕ ಸರಕಾರಕ್ಕೆ ಕಳುಹಿಸಲಾಗುವುದು. ಸರಕಾರದಿಂದ ವರದಿ ಬಂದು ಅರಣ್ಯ ಇಲಾಖೆಯವರು ಮರಗಳ ವ್ಯಾಲ್ಯುವೇಶನ್ ಕಟ್ಟಲು ವರದಿ ನೀಡಿದಂತೆ ಇಲಾಖಾ ವತಿಯಿಂದ ಕ್ರಮಕೈಗೊಳ್ಳಲಾಗುವುದು. ಒಟ್ಟಿನಲ್ಲಿ ರಸ್ತೆ ಅಭಿವೃದ್ದಿಯಾಗುವುದರೊಂದಿಗೆ ಸಮಸ್ಯೆಗಳು ಇಲ್ಲದಂತಾಗಬೇಕೆಂಬುದೇ ನಮ್ಮ ಅಭಿಲಾಷೆಯಾಗಿದೆ ಎಂದರು.

ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್‌ಕುಮಾರ್ ಶೆಟ್ಟಿ ಮಾತನಾಡಿ ಇಚಿಲಂಪಾಡಿ ಪೆರಿಯಶಾಂತಿ ರಾಜ್ಯ ಹೆದ್ದಾರಿಯು ಅರಣ್ಯ ವ್ಯಾಪ್ತಿಯಲ್ಲಿ ಹಾದುಹೋಗುತ್ತಿದ್ದು ರಸ್ತೆ ಅಗಲೀಕರಣಕ್ಕೆ ಸಂಭಂದಪಟ್ಟಂತೆ ಪಿಡಬ್ಲೂಡಿ ಇಲಾಖೆಯವರು ಆನ್‌ಲೈನ್ ಮೂಲಕ ನಮ್ಮ ಇಲಾಖೆಗೆ ಅರ್ಜಿ ಸಲ್ಲಿಸಿದಲ್ಲಿ ಕೂಡಲೆ ಸ್ಥಳ ಪರಿಶೀಲಿಸಿ ಮರ ತೆರವುಗೊಳಿಸಲು ಮುಂದಿನ ಕ್ರಮ ಕೈಗೊಳ್ಳಾಲಾಗುವುದು ಎಂದರು. ರಾಜ್ಯ ನೀತಿ ಟ್ರಸ್ಟ್‌ನ ಕಾರ್ಯದರ್ಶಿ ಜೈನಸ್ ಜೋರ್ಜ್ ಸದಸ್ಯರಾದ ಸುಜಿತ್, ಸಿ.ಪಿಲಿಫ್, ಶೀನ ವರ್ಗೀಸ್, ರಾಜೇಶ್ ಬಿ, ಇಚಿಲಂಪಾಡಿ ಗ್ರಾಮದ ನೀತಿ ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರಶೇಖರ, ಕೋಶಾಧಿಕಾರಿ ಸುರೇಶ್ ಕುಮಾರ್, ವಿಜಯ ಕುಮಾರ್, ವಿ.ಎನ್ ತೋಮಸ್, ಪಿಲಿಫ್ ಸಿ.ಟಿ, ಕಡಬ ವಿಭಾಗದ ಕಾರ್ಯದರ್ಶಿ ಕುಟ್ರುಪ್ಪಾಡಿಯ ಬೆನ್ನಿ ವರ್ಗೀಸ್, ಕಕ್ಕಿಂಜೆ ವಿಭಾಗದ ಕಾರ್ಯದರ್ಶಿ ಬಿನೋಯಿ ಕಕ್ಕಿಂಜೆ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಮಾತನಾಡಿ ರಸ್ತೆ ದುರಸ್ತಿಗೆ ಆಗ್ರಹಿಸಿದರು.

 ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಶ್ರೀನಿವಾಸ ಪೂಜಾರಿ, ಮಾಧವ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಮಾತನಾಡಿ ಸಮಸ್ಯೆ ಪರಿಹಾರಕ್ಕಾಗಿ ಸರಕಾರದ ಮೇಲೆ ಒತ್ತಡ ತರುವುದಾಗಿ ಹೇಳಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು. ರಾಜ್ಯ ನೀತಿ ಟ್ರಸ್ಟ್‌ನ ಅಭಿಲಾಷ್ ಕಲ್ಲುಗುಡ್ಡೆ ಸ್ವಾಗತಿಸಿ ವಂದಿಸಿದರು. ಬಳಿಕ ಅಧಿಕಾರಿಗಳು ಜನಪ್ರತಿನಿಧಿಗಳು ಭರವಸೆಯಂತೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ನಾಗರಾಜ್ ಕೌಕ್ರಾಡಿ ಪಂ.ಅಭಿವೃದ್ದಿ ಅಧಿಕಾರಿ ಜಯರಾಜ್, ಕಡಬ ಶಾಖಾ ಉಪವಲಯ ಅರಣ್ಯಾಧಿಕಾರಿ ರಾಜೇಶ್ ಅರಣ್ಯ ರಕ್ಷಕ ಸುಬ್ರಹ್ಮಣ್ಯ, ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದು. ಉಪ್ಪಿನಂಗಡಿ ಠಾಣಾ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News