ಮಣಿಪಾಲ: ಅಂಧರ ಏಷ್ಯನ್ ಚೆಸ್ ಟೂರ್ನಿಗೆ ಚಾಲನೆ
ಮಣಿಪಾಲ, ಮಾ.22: ಮಣಿಪಾಲ ವಿವಿಯ ಆಶ್ರಯದಲ್ಲಿ ಅಂಧರಿಗಾಗಿ ಹತ್ತು ದಿನಗಳ ಕಾಲ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆಯುವ 2017ನೇ ಸಾಲಿನ ಐಬಿಸಿಎ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್ ಬುಧವಾರ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.
ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿಯೇಷನ್‌ನ(ಐಬಿಸಿಎ) ಉಪಾಧ್ಯಕ್ಷ ಚಾರುದತ್ತ ಜಾಧವ್ ಅವರೊಂದಿಗೆ ಚೆಸ್ ಬೋರ್ಡ್‌ನಲ್ಲಿ ಪಾನ್ ಒಂದನ್ನು ನಡೆಸುವುದರೊಂದಿಗೆ ಟೂರ್ನಿಯನ್ನು ಉದ್ಘಾಟಿಸಿದರು.
ಟೂರ್ನಿಯಲ್ಲಿ ಆತಿಥೇಯ ಭಾರತವೂ ಸೇರಿದಂತೆ ಒಟ್ಟು ಎಂಟು ಏಷ್ಯನ್ ರಾಷ್ಟ್ರಗಳು ಚೆಸ್ ಹಣಾಹಣಿಯಲ್ಲಿ ಸ್ಪರ್ಧಿಸಲಿವೆ. ಭಾಗವಹಿಸುವ ಉಳಿದ ರಾಷ್ಟ್ರೀಯ ತಂಡಗಳೆಂದರೆ ಮಂಗೋಲಿಯಾ, ಯಮೆನ್, ಬಾಂಗ್ಲಾದೇಶ, ಪಿಲಿಪೈನ್ಸ್, ಇರಾನ್, ಶ್ರೀಲಂಕಾ ಹಾಗೂ ನೇಪಾಳ. ಪ್ರತಿ ತಂಡದಿಂದ ಮೂವರು ಅಂಧ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಯಮೆನ್ ಹಾಗೂ ಪಿಲಿಫೈನ್ಸ್ ತಂಡಗಳ ಆಟಗಾರರು ಇಂದು ಸಂಜೆಯ ವೇಳೆ ಮಣಿಪಾಲ ತಲುಪುವ ನಿರೀಕ್ಷೆ ಇರುವುದರಿಂದ ಮೊದಲ ಸುತ್ತಿನ ಪಂದ್ಯಗಳು ನಾಳೆಯಿಂದ ಪ್ರಾರಂಭಗೊಳ್ಳಲಿವೆ.
ಅಂಧರ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌ಬಿ), ಐಬಿಸಿಎ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್‌ಗಳ ಸಹಯೋಗದೊಂದಿಗೆ ಈ ಟೂರ್ನಿಯನ್ನು ಮಣಿಪಾಲ ವಿವಿಯ ಆಶ್ರಯದಲ್ಲಿ ಮೊದಲ ಬಾರಿಗೆ ಮಣಿಪಾಲದಲ್ಲಿ ಆಯೋಜಿಸಿದೆ.
ಸನ್ಮಾನ: ಇದೇ ಸಂದರ್ಭದಲ್ಲಿ ಮಣಿಪಾಲ ವಿವಿ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ರಾಜ್ಯದ ಇಬ್ಬರು ಅಂಧ ಹಾಗೂ ವಿಕಲಚೇತನ ಕ್ರೀಡಾ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಒಬ್ಬರು ಇತ್ತೀಚೆಗೆ ನಡೆದ ಅಂಧರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಭಾರತ ಅಂಧರ ಕ್ರಿಕೆಟ್ ತಂಡದ ಉಪನಾಯಕ ಹಾಗೂ ಟೂರ್ನಿಯ ಸರಣಿ ಶ್ರೇಷ್ಠ ಪ್ರಕಾಶ್ ಜಯರಾಮಯ್ಯ ಹಾಗೂ ಇನ್ನೊಬ್ಬರು ಚೆಸ್‌ನಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಮೂಲತ: ಕುಂದಾಪುರವರಾಗಿ ಈಗ ಹೊನ್ನಾವರದಲ್ಲಿ ಎಸ್ಸೆಸೆಲ್ಸಿಯಲ್ಲಿ ಕಲಿಯುತ್ತಿರುವ ಸಮರ್ಥ್ ಜೆ. ರಾವ್.
ಈ ಸಂದರ್ಭದಲ್ಲಿ ಮಾತನಾಡಿದ ಚಾರುದತ್ತ ಜಾಧವ್, ಭಾರತ ಅಂಧರ ಚೆಸ್‌ನಲ್ಲಿ ಮಾಡುತ್ತಿರುವ ಅತ್ಯುತ್ತಮ ಸಾಧನೆಗಳನ್ನು ವಿವರಿಸಿದರು. ದೇಶದಲ್ಲಿ ಅಂಧರ ಚೆಸ್ ತಡವಾಗಿ 1997ರಲ್ಲಿ ಪ್ರಾರಂಭಗೊಂಡರೂ, ಅನಂತರ ಕ್ಷಿಪ್ರ ಪ್ರಗತಿಯನ್ನು ತೋರುತ್ತಿದೆ. ಅಂಧರ ಚೆಸ್‌ನಲ್ಲಿ ಭಾರತವೀಗ ಐದನೇ ರ್ಯಾಂಕ್‌ನ್ನು ಪಡೆದಿದೆ.ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಕಿಶನ್ ಗಂಗೂಲಿ ಚಿನ್ನದ ಪದಕ ಜಯಿಸಿದ್ದಾರೆ ಎಂದರು.
ಅಂಧರ ಚೆಸ್‌ನಲ್ಲಿ ಭಾರತದ ಆಟಗಾರರು ಪ್ರತಿಕೂಲ ಪರಿಸ್ಥಿತಿಯಲ್ಲೂ ಅತ್ಯುತ್ತಮ ಸಾಧನೆ ತೋರುತಿದ್ದರೂ ಅವರಿಗೆ ಮಾನ್ಯತೆ ನೀಡುವುದರಲ್ಲಿ, ಪ್ರೋತ್ಸಾಹ ದೊರೆಯುವಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ಸರಕಾರ ಇನ್ನೂ ಅಂಧರ ಚೆಸ್‌ಗೆ ಮಾನ್ಯತೆ ನೀಡಿಲ್ಲ ಎಂದು ಚಾರುದತ್ತ ಹೇಳಿದರು.
2006ರಲ್ಲಿ ಭಾರತ, ಅಂಧರಿಗಾಗಿ ಚೆಸ್ ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿ ಪಡಿಸಿದೆ. ಅದನ್ನು ಬಳಸಿ ಅಂಧ ಆಟಗಾರರು ಚೆಸ್‌ನಲ್ಲಿ ಪ್ರಭುತ್ವ ಪಡೆಯಲು ಸಾಧ್ಯವಾಗುತ್ತಿದೆ. ಇಂದು 30ಕ್ಕೂ ಅಧಿಕ ದೇಶಗಳು ಈ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿವೆ. ಅದೇ ರೀತಿ ಇಂಟರ್‌ನೆಟ್ ರೇಡಿಯೊಗಳೂ ಸಹ ಮನೆಯಲ್ಲೇ ಕುಳಿತು ಅಂಧ ಆಟಗಾರರು ಚೆಸ್‌ನಲ್ಲಿ ತರಬೇತಿ ಪಡೆಯಲು ಸಹಕಾರಿಯಾಗಿದೆ ಎಂದರು.
ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಭಾರತದಲ್ಲಿ ಕ್ರಿಕೆಟ್‌ನಿಂದಾಗಿ ಉಳಿದ ಕ್ರೀಡೆಗಳನ್ನು ಕಡೆಗಣಿಸಲಾಗುತ್ತಿದೆ. ಇದು ತಪ್ಪಿ ಚೆಸ್‌ನಂಥ ಕ್ರೀಡೆಗೆ ಹೆಚ್ಚು ಹೆಚ್ಚು ಉತ್ತೇಜನ, ಪ್ರೋತ್ಸಾಹ ಸಿಗಬೇಕು ಎಂದರು.
ಉದ್ಯಮಿ ಪುರುಷೋತ್ತಮ ಶೆಟ್ಟಿ, ಅದಾನಿ ಯುಪಿಸಿಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ ಆಳ್ವ ಉಪಸ್ಥಿತರಿದ್ದರು. ಮಣಿಪಾಲ ವಿವಿ ಸ್ಪೋರ್ಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್‌ನ ಉಪಾದ್ಯಕ್ಷ ಡಾ.ಕೆ.ರಾಜಗೋಪಾಲ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಗಂಧಿನಿ ಕಾರ್ಯಕ್ರಮ ನಿರ್ವಹಿಸಿದರು.