ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಕ್ಸಲ್ ಚಟುವಟಿಕೆ ಸಕ್ರಿಯ

Update: 2017-03-22 14:59 GMT

ಬಂಟ್ವಾಳ, ಮಾ. 22: ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಸುಮಾರು 17 ಗ್ರಾಮಗಳ ಆದಿವಾಸಿ ಮಲೆಕುಡಿಯ ಸಮುದಾಯದವರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದರೆ ತಾಲೂಕಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಸಕ್ರಿಯವಾಗಲಿದೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡನೋರ್ವ ಆತಂಕ ವ್ಯಕ್ತಪಡಿಸಿದರು.

ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಅಧ್ಯಕ್ಷತೆಯಲ್ಲಿ ಬಂಟ್ವಾಳ ಉಪ ವಿಭಾಗ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಹಕ್ಕುಗಳ ಹೋರಾಟ ಸಮಿತಿಯ ರಾಜ್ಯ ಸದಸ್ಯ ಶೇಖರ್ ಬೆಳ್ತಂಗಡಿ ಮಾತನಾಡಿ, 1998ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಿರ್ಮಾಣದ ಸಂದರ್ಭದಲ್ಲಿ ಭಾರೀ ಹೋರಾಟದ ಹೊರತಾಗಿಯೂ ಅಲ್ಲಿನ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಲಾಯಿತು. ಬಳಿಕ ಆ ಭಾಗದಲ್ಲಿ ನಕ್ಸಲ್ ಚಟುವಟಿಕೆ ಆರಂಭಗೊಂಡು ತೀವ್ರ ಸ್ವರೂಪ ಪಡೆಯಿತು.

2012ರಿಂದ ನಕ್ಸಲ್ ಚಟುವಟಿಕೆ ನಿಯಂತ್ರಣದಲ್ಲಿದೆ. ಆದರೆ ಈಗ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕಿನ ಸುಮಾರು 25 ಗ್ರಾಮಗಳು ಒಳಪಡಲಿದ್ದು ಆ ಪೈಕಿ 17 ಗ್ರಾಮಗಳಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೆ ಮತ್ತೆ ತಾಲೂಕಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ಕುರಿತು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ಆದಿವಾಸಿಗಳು ವಾಸವಿರುವ ಗ್ರಾಮಗಳನ್ನು ಕಸ್ತೂರಿ ರಂಗನ್ ವರದಿಯಿಂದ ಕೈಬಿಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಧರ್ಮಸ್ಥಳ ಠಾಣೆ ಎಸ್ಸೈ ರವಿ, ಪಶ್ಚಿಮ ಘಟ್ಟವನ್ನು ಉಳಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ರಚಿತಗೊಂಡಿದ್ದು ನಾಲ್ಕನೆ ಬಾರಿಗೆ ವರದಿಯ ಕರಡು ಮಸೂದೆ ತಯಾರಾಗುತ್ತಿದೆ. ಕೇರಳದ ಮಾದರಿ ವರದಿಯ ವಿರುದ್ಧ ಗ್ರಾಮ ಸಭೆಯಲ್ಲಿ ನಿರ್ಣಯ ಕೈಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಕಳುಹಿಸಿದರೆ ವರದಿ ಜಾರಿಯಾಗುವುದನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಡಿವೈಎಸ್ಪಿ ರವೀಶ್ ಸಿ.ಆರ್. ದನಿಗೂಡಿಸಿದರು.

ಸುಂದರ ಮಲೆಕುಡಿಯ ಪ್ರಕರಣಕ್ಕೆ ಸಂಬಂಧಿಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶೇಖರ್, ಸುಂದರ ಮಲೆಕುಡಿಯರವರ ಕೈಗಳ ಎಂಟು ಬೆರಳುಗಳು ಕತ್ತರಿಸಲ್ಪಟ್ಟರೂ ಆರೋಪಿ ವಿರುದ್ಧ ದಲಿತ ದೌರ್ಜನ್ಯ ಕೇಸ್ ದಾಖಲಿಸಲು ಹೈಕೋರ್ಟ್ ನಿರಾಕರಿಸಿದೆ. ಸುದಂರ ಮಲೆಕುಡಿಯ ಪ್ರಕರಣ ಸವರ್ಣಿಯನಿಂದ ನಡೆದ ದಲಿತ ದೌರ್ಜನ್ಯ ಪ್ರಕರಣವಾಗಿದ್ದು ಈ ಕುರಿತು ಪೊಲೀಸ್ ಇಲಾಖೆ ಹೈಕೋರ್ಟ್‌ಗೆ ಮನವರಿಕೆ ಮಾಡಿ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ರವೀಶ್ ಸಿ.ಆರ್., ಸುಂದರ ಮಲೆಕುಡಿಯಗೆ ಹಲ್ಲೆ ನಡೆಸಿದ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು ಈಗಾಗಲೇ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ದಲಿತ ದೌರ್ಜನ್ಯ ಕೇಸ್ ದಾಖಲಿಸುವ ಬಗ್ಗೆ ಹೈಕೋರ್ಟ್‌ಗೆ ಮನವರಿಕೆ ಮಾಡುವ ಬಗ್ಗೆ ಮತ್ತೊಮ್ಮೆ ಚಿಂತಿಸಲಾಗುವುದು ಎಂದು ಹೇಳಿದರು.

ಸಭೆಯ ಕೊನೆಯಲ್ಲಿ ಮಾತನಾಡಿದ ಡಿವೈಎಸ್ಪಿ ರವೀಶ್, ಎಸ್ಸಿ-ಎಸ್ಟಿ ಕುಂದು ಕೊತರೆ ಸಭೆಯು ವೈಯಕ್ತಿಯ ವಿಷಯಗಳ ಚರ್ಚೆಗೆ ವೇದಿಕೆಯಾಗದೆ ಸಮುದಾಯ ಮತ್ತು ಸಮಾಜಕ್ಕೆ ಉಪಕಾರವಾಗುವಂತ ಚರ್ಚೆಗಳು ನಡೆಯಬೇಕು. ಯಾವುದೇ ವೈಯಕ್ತಿಕ ಸಮಸ್ಯೆಗಳಿದ್ದರೆ ನನ್ನನ್ನು ವೈಯಕ್ತಿಕವಾಗಿ ಭೇಟಿ ಮಾಡಿ. ದಲಿತ ನಾಯಕರು ಸಮುದಾಯದ ಜಾಗೃತಿ ಮೂಡಿಸಬೇಕು. ದಲಿತರ ಶ್ರೇಯಾಭಿವೃದ್ಧಿಗೆ ಪೊಲೀಸ್ ಇಲಾಖೆಯಿಂದ ಆಗುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಲಾಗುವುದು.

ಸಭೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ, ಬೆಳ್ತಂಗಡಿ ವೃತ್ತ ನಿರೀಕ್ಷ ನಾಗೇಶ್ ಕದ್ರಿ, ಪುಂಜಾಲಕಟ್ಟೆ ಎಸ್ಸೈ ಚಂದ್ರಶೇಖರ್, ವೇಣೂರು ಎಸ್ಸೈ ಲೋಲಾಕ್ಷ, ಬಂಟ್ವಾಳ ಕ್ರೈಮ್ ಎಸ್ಸೈ ಗಂಗಾಧರಪ್ಪ, ವಿಟ್ಲ ಎಸ್ಸೈ ನಾಗರಾಜ್, ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಮೊದಲಾದವರು ಉಪಸ್ಥಿತರಿದ್ದರು. ದಲಿತ ಮುಖಂಡರಾದ ದಲಿತ ಮುಖಂಡರಾದ ವಿಶ್ವನಾಥ ಚಂಡ್ತಿಮಾರ್, ಜನಾರ್ದನ ಚಂಡ್ತಿಮಾರ್, ನಾರಾಯಣ ಪುಂಚಮೆ, ಓಬಯ್ಯ ಸಹಿತ ವಿವಿಧ ನಾಯಕರು, ಕಾರ್ಯಕರ್ತರು ಅಹವಾಲು ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News