ಭಾರತದಲ್ಲಿ ಬ್ರಿಟಿಶ್ ಪತ್ರಕರ್ತರ ಮೇಲೆ ಬೇಹುಗಾರಿಕೆಗೆ ಹ್ಯಾಕರ್‌ಗಳ ಬಳಕೆ

Update: 2017-03-22 15:33 GMT

ಲಂಡನ್, ಮಾ. 22: ಭಾರತದಲ್ಲಿರುವ ಬ್ರಿಟಿಶ್ ಪತ್ರಕರ್ತರು, ಪರಿಸರ ಹೋರಾಟಗಾರರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಇಮೇಲ್ ಖಾತೆಗಳ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸಲು ಸ್ಕಾಟ್‌ಲ್ಯಾಂಡ್ ಯಾರ್ಡ್ ಹ್ಯಾಕರ್‌ಗಳನ್ನು ಬಳಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಬ್ರಿಟನ್ ಪೊಲೀಸ್‌ನ ಘಟಕವಾಗಿರುವ ಸ್ಕಾಟ್‌ಲ್ಯಾಂಡ್ ಯಾರ್ಡ್‌ನ ಗುಪ್ತ ಘಟಕವೊಂದು ಭಾರತೀಯ ಪೊಲೀಸ್ ಇಲಾಖೆಯಲ್ಲಿರುವ ಸಂಪರ್ಕಗಳನ್ನು ಬಳಸಿಕೊಂಡು ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನು ಪಡೆದು ನಿಗಾ ಇಟ್ಟಿವೆ ಹಾಗೂ ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂಬುದಾಗಿ ವ್ಯಕ್ತಿಯೊಬ್ಬ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್ ಮುಖ್ಯಸ್ಥರಿಗೆ ಅನಾಮಿಕ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ.

ನಾಲ್ವರು ಗ್ರೀನ್‌ಪೀಸ್ ಹೋರಾಟಗಾರರು ಹಾಗೂ ಪತ್ರಕರ್ತರು ಮತ್ತು ಛಾಯಾಚಿತ್ರಗ್ರಾಹಕರ ಇಮೇಲ್ ಖಾತೆಗಳ ಪಾಸ್‌ವರ್ಡ್‌ಗಳನ್ನೊಳಗೊಂಡ ಪತ್ರವು ಗ್ರೀನ್ ಪಾರ್ಟಿಯ ಮಾಜಿ ಮುಖ್ಯಸ್ಥ ಬ್ಯಾರನೆಸ್ ಜೆನ್ನಿ ಜೋನ್ಸ್ ಅವರಿಗೆ ತಲುಪಿದ ಬಳಿಕ, ಬ್ರಿಟನ್‌ನ ಸ್ವತಂತ್ರ ಪೊಲೀಸ್ ದೂರು ಆಯೋಗ (ಐಪಿಸಿಸಿ)ವು ತನಿಖೆಗೆ ಆದೇಶ ನೀಡಿದೆ ಎಂದು ‘ದ ಗಾರ್ಡಿಯನ್’ ವರದಿ ಮಾಡಿದೆ.

ಹೆಚ್ಚಿನ ಪಾಸ್‌ವರ್ಡ್‌ಗಳು ಸರಿಯಾಗಿವೆ ಎಂಬುದನ್ನೂ ಪತ್ರಿಕೆ ಖಚಿತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News