ರಾಜ್ಯ ಮತ್ತು ಜಿಲ್ಲಾ ಮಟ್ಟದ ‘ಕಾಯಕಲ್ಪ’ ಪ್ರಶಸ್ತಿಗಳ ಪ್ರದಾನ
ಮಂಗಳೂರು, ಮಾ.22: ರಾಷ್ಟ್ರೀಯ ಕಾಯಕಲ್ಪ ಕಾರ್ಯಕ್ರಮ ಯೋಜನೆಯಡಿ 2016-17ನೆ ಸಾಲಿನಲ್ಲಿ ದ.ಕ. ಜಿಲ್ಲೆಯ 9 ಆಸ್ಪತ್ರೆಗಳಿಗೆ ಲಭಿಸಿದ 25 ಲಕ್ಷ ರೂ.ಗಳ ರಾಜ್ಯ ಮತ್ತು ಜಿಲ್ಲಾ ಮಟ್ಟದ ‘ಕಾಯಕಲ್ಪ’ ಪ್ರಶಸ್ತಿ ಪ್ರದಾನ ಸಮಾರಂಭ ದ.ಕ. ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಜರಗಿತು.
ಪ್ರಶಸ್ತಿ ಪ್ರದಾನಗೈದು ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಜಿಲ್ಲೆಯ 9 ಆಸ್ಪತ್ರೆಗಳಿಗೆ ಪ್ರಶಸ್ತಿ ಬಂದಿರುವುದು ಶ್ಲಾಘನೀಯ. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿರುವ ವಿಜಯಪುರ ಮತ್ತು ಶಿವಮೊಗ್ಗ ಆಸ್ಪತ್ರೆಗಳಿಗೆ ಜಿಲ್ಲೆಯ ಆಸ್ಪತ್ರೆಯಿಂದ ತಂಡ ಕಳುಹಿಸಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಿ ತಿಂಗಳೊಳಗೆ ವರದಿ ನೀಡಬೇಕು ಎಂದರು.
ಅತ್ಯುತ್ತಮ ಪ್ರಶಸ್ತಿ ಪಡೆದ ಮೂಡುಬಿದಿರೆ ಸರಕಾರಿ ಆರೋಗ್ಯ ಕೇಂದ್ರ, ಬೋಂದೆಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮಾಧಾನಕರ ಬಹುಮಾನ ಪಡೆದ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಸರಕಾರಿ ಲೇಡಿಗೋಶನ್ ಆಸ್ಪತ್ರೆ, ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಪುತ್ತೂರು ತಾಲೂಕು ಆಸ್ಪತ್ರೆ, ವಿಟ್ಲ ಸರಕಾರಿ ಆರೋಗ್ಯ ಕೇಂದ್ರ, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಪಂ ಸಿಇಒ ಡಾ. ಎಂ.ಆರ್. ರವಿ, ದ.ಕ.ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಉಪಸ್ಥಿತರಿದ್ದರು.