ನೀರಿನ ಮರುಬಳಕೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ. ಅಂಬಾ ಶೆಟ್ಟಿ
ಮಂಗಳೂರು, ಮಾ. 22: ಭವಿಷ್ಯದಲ್ಲಿ ನೀರಿನ ಬೇಡಿಕೆ ಹಾಗೂ ಅಭಾವ ಹೆಚ್ಚಾಗುವುದರಿಂದ ನೀರನ್ನು ಶುಚಿಗೊಳಿಸಿ ಮರುಬಳಕೆಗೆ ಈಗಿನಿಂದಲೇ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸುರತ್ಕಲ್ ಎನ್‌ಐಟಿಕೆ ಕಾಲೇಜಿನ ಅಪ್ಲೈಡ್ ಮೆಕಾನಿಕ್ ವಿಭಾಗದ ಪ್ರಾಧ್ಯಾಪಕ ಡಾ. ಅಂಬಾ ಶೆಟ್ಟಿ ಕರೆ ನೀಡಿದರು.
ಇನ್ಸ್‌ಸ್ಟಿಟ್ಯೂಶನ್ ಆಫ್ ಇಂಜಿನಿಯರ್ಸ್ ಮಂಗಳೂರು ಸ್ಥಳೀಯ ಘಟಕ, ಇನ್ಸ್‌ಸ್ಟಿಟ್ಯೂಶನ್ ಆ್ ವ್ಯಾಲ್ಯುವರ್ಸ್ ಮಂಗಳೂರು ಶಾಖೆ ಹಾಗೂ ಕೊಡಗು, ದ.ಕ. ಉಡುಪಿ ಇಂಜಿನಿಯರ್ಸ್‌ಗಳ ಸಂಘದ ವತಿಯಿಂದ ವಿಶ್ವ ಜಲ ಸಂರಕ್ಷಣಾ ದಿನದ ಅಂಗವಾಗಿ ನಗರದ ವುಡ್‌ಲ್ಯಾಂಡ್ಸ್‌ನಲ್ಲಿ ಬುಧವಾರ ತ್ಯಾಜ್ಯ ನೀರಿನ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೀಗ ಎಲ್ಲೆಡೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಾದರೂ ಪೂರೈಕೆ ಮಾತ್ರ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಿಕೊಳ್ಳುವ ಪ್ರಕ್ರಿಯೆ ಅಳವಡಿಸಿಕೊಳ್ಳಬೇಕು. ಅಭಿವೃದ್ಧಿ ಹೊಂದಿದ ಹಲವು ರಾಷ್ಟ್ರಗಳಲ್ಲಿ ನೀರಿನ ಮರು ಬಳಕೆ ಮಾಡಲಾಗುತ್ತಿದೆ. ಸಿಂಗಾಪುರದಲ್ಲಿ ನ್ಯೂ ವಾಟರ್ ಹೆಸರಿನಲ್ಲಿ ಇದನ್ನು ಬಳಸಲಾಗುತ್ತಿದೆ ಎಂದು ಡಾ. ಅಂಬಾ ಶೆಟ್ಟಿ ಹೇಳಿದರು.
ಭಾರತದಲ್ಲಿ ಗೃಹಬಳಕೆಗೆ ಶೇ.8, ಕೈಗಾರಿಕೆಗೆ ಶೇ.10, ಕೃಷಿಗೆ ಶೇ.82ರಷ್ಟು ನೀರು ಬಳಕೆಯಾಗುತ್ತಿದೆ. ಅವೈಜ್ಞಾನಿಕ ಪ್ರಕ್ರಿಯೆಯನ್ನು ಕೃಷಿ ಕ್ಷೇತ್ರದಲ್ಲಿ ಪಾಲಿಸುತ್ತಿರುವುದು ಹೆಚ್ಚು ಪ್ರಮಾಣದಲ್ಲಿ ನೀರು ವ್ಯಯವಾಗಲು ಕಾರಣವಾಗಿದೆ. ಶೇ. 13ರಷ್ಟು ಸೋರಿಕೆಯಿಂದಲೇ ನೀರು ಪೋಲಾಗುತ್ತಿದೆ. ತ್ಯಾಜ್ಯ ನೀರಿನ ಉತ್ಪಾದನೆಯನ್ನು ನಾವು ಆದಷ್ಟು ಕಡಿಮೆಗೊಳಿಸಬೇಕಲ್ಲದೆ, ಈ ನೀರನ್ನು ಮರು ಬಳಕೆ ಮಾಡಬೇಕು ಎಂದರು.
ಪ್ರೊ. ಜಿ.ಆರ್ ರೈ, ಬಿ.ಎಂ. ಸುನಿಲ್, ಡಾ. ಪಾಂಡುರಂಗ ವಿಠಲ್, ಕಾಂತರಾಜು ಮತ್ತಿತರರು ಉಪಸ್ಥಿತರಿದ್ದರು.