ದಿಗ್ಬಂಧನಕ್ಕೆ ಹೆದರುವುದಿಲ್ಲ: ಉ. ಕೊರಿಯ

Update: 2017-03-22 16:19 GMT

ಜಿನೇವ, ಮಾ. 22: ಜಾಗತಿಕ ಹಣಕಾಸು ವ್ಯವಸ್ಥೆಯಿಂದ ಉತ್ತರ ಕೊರಿಯವನ್ನು ಪ್ರತ್ಯೇಕಿಸುವ ಉದ್ದೇಶದೊಂದಿಗೆ ದಿಗ್ಬಂಧನಗಳನ್ನು ವಿಸ್ತರಿಸುವ ಅಮೆರಿಕದ ಕ್ರಮದಿಂದ ಉತ್ತರ ಕೊರಿಯ ಹೆದರುವುದಿಲ್ಲ ಎಂದು ವಿಶ್ವಸಂಸ್ಥೆಯಲ್ಲಿರುವ ಉತ್ತರ ಕೊರಿಯದ ರಾಯಭಾರಿಯೊಬ್ಬರು ಹೇಳಿದ್ದಾರೆ.

ಉತ್ತರ ಕೊರಿಯವು ತನ್ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಹೆಚ್ಚಿಸುವುದು ಎಂದು ಉತ್ತರ ಕೊರಿಯದ ಉಪ ರಾಯಭಾರಿ ಚೋ ಮಯಾಂಗ್ ನಾಮ್ ಮಂಗಳವಾರ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಮುಂಚಿತ ದಾಳಿ ನಡೆಸುವ ಸಾಮರ್ಥ್ಯ ಮತ್ತು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ ಅಭಿವೃದ್ಧಿ ಉತ್ತರ ಕೊರಿಯದ ಯೋಜನೆಯಲ್ಲಿ ಸೇರಿದೆ ಎಂದು ಅವರು ತಿಳಿಸಿದರು.

ಉತ್ತರ ಕೊರಿಯದ ನೂತನ ಕ್ಷಿಪಣಿ ಪರೀಕ್ಷೆ ವಿಫಲ: ದಕ್ಷಿಣ

ಸಿಯೋಲ್ (ದಕ್ಷಿಣ ಕೊರಿಯ), ಮಾ. 22: ಉತ್ತರ ಕೊರಿಯ ಬುಧವಾರ ನಡೆಸಿದ ನೂತನ ಕ್ಷಿಪಣಿ ಪರೀಕ್ಷೆಯೊಂದು ವಿಫಲವಾಗಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕಗಳು ಹೇಳಿವೆ.

ಪ್ಯಾಂಗ್‌ಯಾಂಗ್ ನಾಲ್ಕು ರಾಕೆಟ್‌ಗಳನ್ನು ಉಡಾಯಿಸಿದ ಎರಡು ವಾರಗಳ ಬಳಿಕ ಈ ಹೊಸ ಪ್ರಯತ್ನ ನಡೆದಿದೆ.

ಅಮೆರಿಕದ ಪ್ರಧಾನ ನೆಲವನ್ನು ಪರಮಾಣು ಸಿಡಿತಲೆಯೊಂದಿಗೆ ತಲುಪಬಲ್ಲ ಸುದೀರ್ಘ ವ್ಯಾಪ್ತಿಯ ಕ್ಷಿಪಣಿಯೊಂದನ್ನು ಅಭಿವೃದ್ಧಿಪಡಿಸುವ ಯತ್ನದಲ್ಲಿ ಉತ್ತರ ಕೊರಿಯ ನಿರತವಾಗಿದೆ.

ಉತ್ತರ ಕೊರಿಯ ಬುಧವಾರ ಬೆಳಗ್ಗೆ ಪೂರ್ವದ ವೋನ್ಸನ್ ಬಂದರಿನಲ್ಲಿರುವ ವಾಯು ನೆಲೆಯೊಂದರಿಂದ ಕ್ಷಿಪಣಿಯೊಂದನ್ನು ಉಡಾಯಿಸಿತು, ಆದರೆ ಈ ಉಡಾವಣೆ ವಿಫಲಗೊಂಡಿದೆಯೆಂದು ಭಾವಿಸಲಾಗಿದೆ ಎಂದು ದಕ್ಷಿಣ ಕೊರಿಯದ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News