ದರೋಡೆ ಪ್ರಕರಣ: ಆರೋಪಿಗಳ ಸೆರೆ?
ಉಡುಪಿ, ಮಾ.22: ಕೇರಳದ ಚಿನ್ನಾಭರಣ ವ್ಯಾಪಾರಿಯನ್ನು ಅಪಹರಿಸಿ ಲಕ್ಷಾಂತರ ರೂ.ಮೌಲ್ಯದ ಸೊತ್ತು ಹಾಗೂ ನಗದನ್ನು ದರೋಡೆ ಮಾಡಿದ ಪ್ರಕರಣವನ್ನು ಬೇಧಿಸಿರುವ ಉಡುಪಿ ಜಿಲ್ಲಾ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಪ್ರಕರಣಕ್ಕಾಗಿ ರಚಿಸಲಾಗಿರುವ ತಂಡಗಳು ತಮಗೆ ಸಿಕ್ಕಿದ ಸುಳಿವಿನ ಆಧಾರದಲ್ಲಿ ವಿವಿದೆಡೆಗಳಿಂದ ಆರೋಪಿಗಳು ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರನ್ನೆಲ್ಲಾ ಉಡುಪಿಗೆ ಕರೆದುಕೊಂಡು ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ತಿಳಿಸಿದರು. ಈ ಬಗ್ಗೆ ನಾಳೆ ಅಪರಾಹ್ನದ ವೇಳೆಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಅವರು ಹೇಳಿದರು.
ಪೊಲೀಸರು ವಶಕ್ಕೆ ಪಡೆದವರಲ್ಲಿ ಹಿರಿಯಡ್ಕ, ಪೆರ್ಡೂರು ಪರಿಸರದ ವ್ಯಕ್ತಿಳೂ ಸೇರಿದ್ದಾರೆ ಎಂದು ಗೊತ್ತಾಗಿದೆ.
ದಿಲೀಪ್ ಟಿ.ಡಿ. ಎಂಬವರು ಮಾ.17ರಂದು ಕೇರಳದ ತ್ರಿಶೂರ್‌ನಿಂದ ಎರಡು ಕೆ.ಜಿ. ಚಿನ್ನಾಭರಣಗಳೊಂದಿಗೆ ಮಂಗಳೂರಿಗೆ ಬಂದು ದ.ಕ., ಕಾರ್ಕಳ, ಪೆರ್ಡೂರುಗಳ ಚಿನ್ನದಂಗಡಿಗಳಲ್ಲಿ ಅವುಗಳನ್ನು ಮಾರಿ, ಉಳಿದ 1.5ಕೆ.ಜಿ. ಚಿನ್ನಾಭರಣ ಹಾಗೂ 2.50ಲಕ್ಷ ರೂ.ನಗದಿನೊಂದಿಗೆ ಹಿರಿಯಡ್ಕದಿಂದ ಉಡುಪಿಗೆ ಬಸ್‌ನಲ್ಲಿ ಬರುತಿದ್ದಾಗ ಅದೇ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಮೂವರು ಪೊಲೀಸರಂತೆ ನಟಿಸಿ ಅವರನ್ನು ಬಲಾತ್ಕಾರವಾಗಿ ಬಸ್‌ನಿಂದ ಇಳಿಸಿ ಕಾರಿನಲ್ಲಿ ಅಪಹರಿಸಿತ್ತು. ಅವರಲ್ಲಿದ್ದ ಸೊತ್ತು, ನಗದನ್ನು ದರೋಡೆ ಮಾಡಿದ ತಂಡ ಪಡುಬಿದ್ರಿ ಸಮೀಪ ಅವರನ್ನು ಹೊರಕ್ಕೆ ತಳ್ಳಿ ಪರಾರಿಯಾಗಿತ್ತು.