ಪಶ್ಚಿಮ ವಾಹಿನಿಗೆ 1273 ಕೋಟಿರೂ. ಪ್ರಸ್ತಾವನೆ
ಉಡುಪಿ, ಮಾ.22: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹರಿಯುವ ಮುಖ್ಯ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು 1273 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆಯು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ವಿಧಾನಪರಿಷತ್‌ನಲ್ಲಿ ವಿಪಕ್ಷ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಬುಧವಾರ ಕೇಳಿದ ಚುಕ್ಕಿಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು. ಪಶ್ಚಿಮ ವಾಹಿನಿ ಯೋಜನೆಯನ್ನು ನೀರಾವರಿ ಇಲಾಖೆಯಿಂದ ಅನುದಾನದ ಲಭ್ಯತೆಗನುಗುಣವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಎ.ಜಿ.ಕೊಡ್ಗಿ ಅವರ ಸೌಭಾಗ್ಯ ಸಂಜೀವಿನಿ ಯೋಜನೆಯನ್ನು ಜಲಸಂಪನ್ಮೂಲ ಇಲಾಖೆಯಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 2013ರಲ್ಲಿ ವರ್ಗಾಯಿಸಲಾಗಿದ್ದು, ಈ ಯೋಜನೆಯ ಅನುಷ್ಠಾನದ ಸಂಬಂಧ ಯೋಜನಾ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕಾರ್ಯಸಾದ್ಯತಾ ವರದಿಯನ್ನು ತಯಾರಿಸಲಾಗಿದ್ದು ಅದನ್ನು ಯೋಜನಾ ಇಲಾಖೆಗೆ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮವು ಸೂಚಿಸಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮೂಲಕ ಸೌಭಾಗ್ಯ ಸಂಜೀವಿನಿ ಯೋಜನೆಯ ಕಾರ್ಯಸಾದ್ಯತಾ ವರದಿ ಪರಿಶೀಲನೆಯಲ್ಲಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.