ರೋಶನಿ ನಿಲಯದಲ್ಲಿ ‘ ಮಾನವಿ ’ಸಿನಿಮಾ ಹಬ್ಬ ಆರಂಭ
ಮಂಗಳೂರು.ಮಾ,22:ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಹಮತ ಫಿಲಂ ಸೋಸೈಟಿ ಸಹಯೋಗದೊಂದಿಗೆ ರೋಶನಿ ನಿಲಯ ಸ್ಕೂಲ್ ಆಫ್ ಸೊಶಿಯಲ್ ವರ್ಕ್ ಸಂಸ್ಥೆ ಹಮ್ಮಿಕೊಂಡಿ ರುವ ‘ಮಾನವಿ’ ಕಾರ್ಯಕ್ರಮದ ಪ್ರಯುಕ್ತ ಮಾರ್ಚ್ 22ರಿಂದ 26ರವರೆಗೆ ಸಂಸ್ಥೆಯ ರೋಶನಿ ನಿಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಫಿಲ್ಮ್ ಫೆಸ್ಟಿವಲ್‌ನ್ನು ಹಿರಿಯ ಸಮಾಜ ಸೇವಕಿ ಡಾ.ಒಲಿಂಡಾ ಪಿರೇರಾ ಉದ್ಘಾಟಿಸಿ ಶುಭಕೋರಿದರು.
ಇಂದಿನ ಸಮಾಜದ ಮೇಲೆ ಪ್ರಭಾವ ಬೀರಲು ಸಾಧ್ಯವಿರುವ ಪ್ರಬಲ ಮಾಧ್ಯಮವಾದ ಸಿನಿಮಾ ಮೂಲಕ ಯುವ ಜನರಿಗೆ ಮಹಿಳಾ ಸಬಲೀಕರಣದ ಸಂದೇಶ ನೀಡುವ ಪ್ರಯತ್ನ ಶ್ಲಾಘನೀಯ ಯುವ ಜನರು ಈ ಸಂದೇಶವನ್ನು ಇನ್ನಷ್ಟು ವಿಸ್ತರಿಸುವಂತಾಗಬೇಕು ಎಂದು ಒಲಿಂಡಾ ಪಿರೇರಾ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸಹಮತ ಸಂಘಟನೆಯ ಅಧ್ಯಕ್ಷ ಕೃಷ್ಣಮೂರ್ತಿ ಚಿತ್ರಾಪುರ,ರೋಶನಿ ನಿಲಯದ ಪ್ರಾಂಶುಪಾಲೆ ಸೋಫಿಯಾ ಫೆರ್ನಾಂಡೀಸ್,ಸಹಮತದ ಜೊತೆ ಕಾರ್ಯದರ್ಶಿ ವಾಸುದೇವ ಉಚ್ಚಿಲ್,ರೋಶನಿ ನಿಲಯದ ಸಮಾಜ ಕಾರ್ಯ ವಿಸ್ತರಣಾ ಯೋಜನೆಯ ನಿರ್ದೇಶಕ ಕಿಶೋರ್ ಅತ್ತಾವರ,ಪ್ರೊ.ಶೋಭನಾ ಕಾರ್ಯಕ್ರಮ ನಿರೂಪಿಸಿದರು.
ಸಿನಿಮಾ ಹಬ್ಬದ ಪ್ರಥಮ ದಿನವಾದ ಬುಧವಾರ ಕೆನ್ಯಾದ ಒಸಮಾನೆ ಸಿಂಬಿನೆಯವರ 124 ನಿಮಿಷದ ‘ಮೂಲಾದೆ ’ಚಲನಚಿತ್ರ ಪ್ರದರ್ಶನ ಗೊಂಡಿತು.ಕೆನ್ಯಾ ಸೇರಿದಂತೆ ಆಫ್ರಿಕಾ ಖಂಡದಲ್ಲಿರುವ ಮಹಿಳೆಯರ ಅಂಗಚೇಧನ ಮೂಲಕ ಅವರನ್ನು ‘ಪವಿತ್ರ’ಗೊಳಿಸುವ ಹೆಸರಿನಲ್ಲಿ ನಡೆಸಲಾಗುವ ಅಮಾನುಷ ಕ್ರಮದ ವಿರುದ್ಧ ಮಹಿಳೆಯರು ನಡೆಸುವ ಹೋರಾಟ;ಅದನ್ನು ಧಾರ್ಮಿಕತೆಯ ಹೆಸರಿನಲ್ಲಿ ಹತ್ತಿಕ್ಕಲು ನಡೆಸುವ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಮಾನವೀಯ ನೆಲೆಯ ಹೋರಾಟದ ಕಥೆಯನ್ನು ಮೂಲಾದೆ ಚಲನಚಿತ್ರ ಒಳಗೊಂಡಿದೆ.
ಚಲನಚಿತ್ರದ ಬಳಿಕ ನಡೆದ ಚಲನಚಿತ್ರದ ಬಗೆಗಿನ ಸಂವಾದ ಕಾರ್ಯಕ್ರಮದಲ್ಲಿ ಸಹಮತದ ಸಂಚಾಲಕರಾದ ಐವನ್ ಡಿ ಸಿಲ್ವ ಮಾತನಾಡುತ್ತಾ ಈ ರೀತಿ ಅಮಾನವೀಯ ಆಚರಣೆ ದಕ್ಷಿಣ ಆಫ್ರೀ ಕಾದ ಒಂದು ಸಮುದಾಯದ ಒಳಗೆ ಇರುವ ಸಮಸ್ಯೆ ಮಾತ್ರವಲ್ಲ.ಭಾರತದ ಮೇಲ್ವರ್ಗ ದಲ್ಲೂ ಈ ರೀತಿಯ ಅಮಾನುಷ ಆಚರಣೆ ಇದೆ.ಮಾನವೀಯ ನೆಲೆಯಲ್ಲಿ ಈ ರೀತಿಯ ಮಹಿಳಾ ವಿರೋಧಿ ಮತ್ತು ಅಮಾನುಷ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಚಲನಚಿತ್ರ ಮಹತ್ವದ್ದಾಗಿದೆ ಎಂದರು.
ಮಾ.23ರಂದು ಸಂಜೆ 5 ಗಂಟೆಗೆ ಬ್ರೆಝಿಲ್‌ನ ಚಲನಚಿತ್ರ,24ರಂದು ಕೇತನ್ ಮೆಹ್ತಾರಾ ಮಿರ್ಚಿ ಮಸಾಲ,25ರಂದು ಅಮೇರಿಕಾದ ಚಲನಚಿತ್ರ ಮತ್ತು 26ರಂದು ಬೆಳಗ್ಗೆ 9.30 ಕ್ಕೆ ಅಮೇರಿಕಾದ ಚಲನಚಿತ್ರ,ಮಧ್ಯಾಹ್ನ 12.30 ಗಂಟೆಗೆ ಶ್ಯಾಮ್ ಬೆನಗಲ್‌ರವರ ‘ಮಂಥನ್ ’ಮತ್ತು ಸಂಜೆ 5 ಗಂಟೆಗೆ ಇಂಗ್ಲೆಂಡಿನ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.