×
Ad

ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 6 ಜೋಡಿಗಳ ಸರಳ ಸಾಮೂಹಿಕ ವಿವಾಹ

Update: 2017-03-22 22:45 IST

ಉಳ್ಳಾಲ,ಮಾ.22: ಹಿಂದಿನ ಕಾಲದಲ್ಲಿ ಬೆರಳೆಣಿಕೆಯ ಶ್ರೀಮಂತರಿದ್ದು ಅವರುಗಳು ಬಡವರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದ್ದು ಸಾಕಷ್ಟು ಹೃದಯವೈಶಾಲ್ಯವುಳ್ಳ ಶ್ರೀಮಂತರು ಸಮಾಜದಲ್ಲಿದ್ದು ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಅಭಿಪ್ರಾಯಪಟ್ಟರು.

ತೊಕ್ಕೊಟ್ಟು ಅಳೇಕಲದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ಬುಧವಾರದಂದು ನಡೆದ ಸರಳ ಸಾಮೂಹಿಕ ವಿವಾಹ ಸಮಾರಂಭದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರತಿಯೊಬ್ಬರೂ ಸರಳ ಜೀವನವನ್ನೇ ನಡೆಸುತ್ತಿದ್ದರೆ, ಪ್ರತ್ಯೇಕವಾಗಿ ಸಾಮೂಹಿಕ ಸರಳ ವಿವಾಹಗಳನ್ನು ನಡೆಸುವ ಅವಶ್ಯಕತೆನೇ ಇರಲಿಲ್ಲ. ಅನೇಕ ಶ್ರೀಮಂತರು ,ಸಂಘಸಂಸ್ಥೆಗಳ ಮುಖಾಂತರ ಸರಳ ವಿವಾಹಗಳನ್ನು ನಡೆಸುತ್ತಿದ್ದರೂ ಇದರ ಪ್ರಯೋಜನವನ್ನು ಪಡೆಯ ಬೇಕಾದವರು ತಮ್ಮಲ್ಲಿರುವ ಕೀಳರಿಮೆಯಿಂದ ಹಿಂಜರಿಯುತ್ತಿರುವುದು ವಿಷಾದಕರ.

ಮುಸ್ಲಿಂ ಸಮುದಾಯದ ಯುವಕರು ದುಷ್ಚಟಗಳಿಂದ ದೂರವಿರಲು ಅವರಿಗೆ ಶಿಕ್ಷಣವನ್ನು ನೀಡಬೇಕಿದ್ದು, ಸಂಘಸಂಸ್ಥೆಗಳು ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವತ್ತಲೂ ಮುತುವರ್ಜಿ ವಹಿಸಬೇಕೆಂದರು.

ಮುಖ್ಯ ಅತಿಥಿಗಳಾಗಿದ್ದ ಬಿಜೆಪಿ ಮಂಗಳೂರು ವಿದಾನಸಭಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ ಬಡ ಕುಟುಂಬದ ಹೆಣ್ಮಕ್ಕಳ ಸಾಮೂಹಿಕ ವಿವಾಹವನ್ನು ಮಾಡಿಸುವುದು ಪವಿತ್ರ ಹಜ್ ಯಾತ್ರೆಯ ಪುಣ್ಯ ಪಡೆದಂತೆ. ನುಸ್ರತುಲ್ ಮಸಾಕೀನ್ ಟ್ರಸ್ಟ್ ಮುಂದಿನ ದಿವಸಗಳಲ್ಲಿ ಹಿಂದೂ ಮತ್ತು ಕ್ರೈಸ್ತರ ಬಡ ಕುಟುಂಬದ ಹೆಣ್ಮಕ್ಕಳ ಮದುವೆಯನ್ನೂ ಮಾಡಲು ಮುಂದಾಗಿದ್ದು ಇದು ಸಾಮರಸ್ಯದ ಜೀವನಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹದಲ್ಲಿ 6 ನೂತನ ಜೋಡಿಗಳಾದ ಆದಮ್-ನಫೀಸತ್ತುಲ್ ಮಿಸ್ರಿಯಾ, ಅಬ್ಬೂಬಕ್ಕರ್ ಸಿದ್ಧೀಕ್-ಗುಲ್ ನಾರ್, ಅಶ್ರಫ್ ಹಸನ್-ಫಾತಿಮಾ ತಸ್ಲಿಮಾ, ಸಯ್ಯದ್ ಆಸೀಫ್-ರುಕ್ಸಾನ, ಅಬ್ದುಲ್ ಅಝೀರ್-ಆಯಿಷಾ ಬಾನು, ಅಬ್ಬೂಬಕ್ಕರ್ ಸಾಧಿಕ್-ರಂಝೀಣ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ದ.ಕ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ವಿವಾಹ ನೆರವೇರಿಸಿಕೊಟ್ಟರು. ನುಸ್ರತುಲ್ ಮಸಾಕೀನ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ತ್ವಾಹಾ ಅವರು ಸಭಾಧ್ಯಕ್ಷತೆ ವಹಿಸಿದ್ದರು.

ಉಳ್ಳಾಲ ಸೈಯದ್ ಮದನಿ ದರ್ಗಾದ ಖತೀಬರಾದ ಮಹಮ್ಮದ್ ಶಮೀಮ್ ಸಖಾಫಿ ಅವರು ದುವಾ ನೆರವೇರಿಸಿದರು.

ಬೋಳಂಗಡಿ ಹವ್ವಾ ಮಸೀದಿಯ ಖತೀಬರಾದ ಸಯ್ಯದ್ ಯಹ್ಯಾ ತಂಞಳ್, ಉಳ್ಳಾಲ ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಯೂಸುಫ್ ಮಿಸ್ಬಾಹಿ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಮ್.ಎ ಗಫೂರ್, ದ.ಕ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಮ್ ರಶೀದ್, ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೇನ್ ಕುಂಞಿಮೋನು, ಮಾಜಿ ವಿದಾನ ಪರಿಷತ್ ಸದಸ್ಯ ಕೆ.ಎಸ್ ಮಹಮ್ಮದ್ ಮಸೂದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಹಾಜಿ.ಡಾ.ಕೆ.ಎ ಮುನೀರ್ ಬಾವಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ನುಸ್ರತುಲ್ ಮಸಾಕೀನ್ ಟ್ರಸ್ಟ್ ಉಪಾಧ್ಯಕ್ಷ ಯು.ಎಸ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ದಿವಸಗಳಲ್ಲಿ ಇನ್ನಷ್ಟು ಆರ್ಥಿಕವಾಗಿ ಹಿಂದುಳಿದಂತಹ ಕುಟುಂಬಗಳನ್ನು ಹುಡುಕಿ ಅವರ ಮನೆಗಳಿಗೆ ತೆರಳಿ ಅಲ್ಲೇ ಉಚಿತ ಸರಳ ವಿವಾಹವನ್ನು ನೆರವೇರಿಸಲಾಗುವುದು. ಸ್ಥಳೀಯವಾಗಿ ಹಿಂದುಳಿದ ಎಲ್ಲಾ ಸಮಾಜದ ಆಯ್ದ ಕುಟುಂಬಗಳಿಗೆ ತಿಂಗಳ ರೇಷನ್ ಕಿಟ್ಟನ್ನು ಟ್ರಸ್ಟ್ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.

ಮಹಮ್ಮದ್ ತ್ವಾಹಾ, ಅಧ್ಯಕ್ಷರು ನುಸ್ರತಲ್ ಮಸಾಕೀನ್ ಟ್ರಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News