ಚೆಂಬುಗುಡ್ಡೆ: ಬೋರ್‌ವೆಲ್ ಕೊರೆತಕ್ಕೆ ಸಾರ್ವಜನಿಕರ ವಿರೋಧ

Update: 2017-03-22 17:29 GMT

ಉಳ್ಳಾಲ,ಮಾ.22: ಉಳ್ಳಾಲ ನಗರ ಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಬಳಿ ಸ್ಥಳೀಯ ವಾಸಿಗಳನ್ನು ಗಣನೆಗೆ ತೆಗೆಯದೆ ಏಕಾಏಕಿ ಬೋರ್ ಅಗೆಸಲು ಮುಂದಾದ ನಗರ ಸಭಾ ಸದಸ್ಯನ ವಿರುದ್ಧ ನಾಗರಿಕರು ತಿರುಗಿಬಿದ್ದು ಬೋರ್ ಕಾಮಗಾರಿಯನ್ನು ತಡೆ ಹಿಡಿದ ಘಟನೆ ಬುಧವಾರ ನಡೆದಿದೆ.

    ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ವಾರ್ಡ್‌ನ ಸದಸ್ಯ ಬಾಝಿಲ್ ಡಿಸೋಜಾ ಅವರು ಬುಧವಾರ ಸಂಜೆ ತನ್ನ ವಾರ್ಡಿನ ಚೆಂಬುಗುಡ್ಡೆ ಪಿಲಾರಿನ ಮದರಸದ ಬಳಿ ಏಕಾಏಕಿ ಬೋರ್ ಕೊರೆಯಲು ಮುಂದಾಗಿದ್ದಾರೆ. ಚೆಂಬುಗುಡ್ಡೆ ಪಿಲಾರಿನಲ್ಲಿ ಈ ಮೊದಲೇ ಮೂರು ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದು ಅದು ನಿಷ್ಕ್ರಿಯಗೊಂಡಿದ್ದು, ಇಲ್ಲಿನ ಬಹುತೇಕ ಬಾವಿಗಳು ನೀರಿಲ್ಲದೆ ಬರಿದಾಗಿದ್ದು,ಇಲ್ಲಿ ಮತ್ತೆ ಬೋರ್ ಕೊರೆದರೆ ಅಂತರ್ಜಲ ಬರಿದಾಗಿ ಸ್ಥಳೀಯರು ನೀರಿಗಾಗಿ ಬವಣೆ ಪಡುವಂತಾಗುತ್ತದೆ ಎಂದು ಆರೋಪಿಸಿ ಸ್ಥಳೀಯರು ನೆರೆಯ ವಾರ್ಡಿಗೆ ನೀರು ನೀಡಲು ಮುಂದಾದ ತಮ್ಮ ವಾರ್ಡ್‌ನ ಕೌನ್ಸಿಲರ್ ಬಾಝಿಲ್ ಅವರನ್ನು ಘೆರಾವ್ ಹಾಕಿ ಚೆನ್ನಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೋರ್‌ವೆಲ್ ಯಂತ್ರ ವಾಪಸ್

 ಕೊಳವೆ ಬಾವಿ ಕೊರೆಯಲು ಮುಂದಾದಾಗ ಚೆಂಬುಗುಡ್ಡೆ ಪ್ರದೇಶವಾಸಿಗಳೆಲ್ಲಾ ಒಗ್ಗಟ್ಟಾಗಿ ಬೋರ್‌ವೆಲ್ ಕಾಮಗಾರಿಯನ್ನು ತಡೆದು ನಿಲ್ಲಿಸಿದರು. ಸ್ಥಳದಲ್ಲಿ ಅನೇಕ ಮಂದಿ ನೆರದು ಗೊಂದಲ ಉಂಟಾದಾಗ ಉಳ್ಳಾಲ ಪೊಲೀಸರು ಮಧ್ಯಪ್ರವೇಶಿಬೇಕಾಯಿತು. ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರು ಮಧ್ಯ ಪ್ರವೇಶಿಸಿ ನಗರ ಅಭಿಯಂತರೆ ರೇಣುಕಾ ಅವರಲ್ಲಿ ಪೋನ್ ಮುಖೇನ ಮಾತುಕತೆ ನಡೆಸಿದ್ದು ಅಭಿಯಂತರೆ ಗುರುವಾರ ಬೆಳಿಗ್ಗೆ ನಗರಸಭೆಯಲ್ಲಿ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅದುವರೆಗೆ ಯಾವುದೇ ಕಾಮಗಾರಿಗೆ ನಡೆಸದಂತೆ ಇನ್ಸ್‌ಪೆಕ್ಟರ್ ಬೋರ್‌ವೆಲ್ ನೌಕರರಿಗೆ ಆದೇಶಿಸಿದ ನಿಟ್ಟಿನಲ್ಲಿ ಬೋರ್‌ವೆಲ್ ಲಾರಿಯು ಅಲ್ಲಿಂದ ವಾಪಸ್ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News