ಎಸೆಸೆಲ್ಸಿ ಪರೀಕ್ಷೆಗೆ ಬಂಟ್ವಾಳದಲ್ಲಿ ಸಕಲ ಸಿದ್ಧತೆ

Update: 2017-03-22 17:37 GMT

ಬಂಟ್ವಾಳ, ಮಾ. 22: ರಾಜ್ಯಾದ್ಯಂತ ಮಾರ್ಚ್ 30ರಿಂದ ಆರಂಭಗೊಳ್ಳಲಿರುವ 2016-17 ಸಾಲಿನ ಎಸೆಸೆಲ್ಸಿ ಪರೀಕ್ಷೆಗಳನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಕಲ ಪೂರ್ವ ಸಿದ್ಧತೆಗಳನ್ನು ಕೈಗೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಮುಖ ಮಾರ್ಗಸೂಚಿಗಳನ್ನು ಅಳವಡಿಸಿದೆ. ಅಲ್ಲದೆ ಬಂಟ್ವಾಳ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳಲ್ಲಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಿ, ಹಾಜರಾಗುವಂತೆ ಸೂಚನೆಗಳನ್ನೂ ನೀಡಿದೆ.

ಬಂಟ್ವಾಳ ತಾಲೂಕಿನಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳಿವೆ. ಅವುಗಳಲ್ಲಿ ವಾಮದಪದವು ಮತ್ತು ವಗ್ಗ ಸ.ಪ.ಪೂ.ಕಾಲೇಜುಗಳಲ್ಲಿ 2 ಸ್ವತಂತ್ರ ಪರೀಕ್ಷಾ ಕೇಂದ್ರಗಳಾದರೆ 14 ಕ್ಲಸ್ಟರ್ ಕೇಂದ್ರಗಳಿವೆ. ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಒಟ್ಟು 6,137 ಪರೀಕ್ಷಾರ್ಥಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಒಟ್ಟು 2,290 ಹೊಸ ವಿದ್ಯಾರ್ಥಿಗಳಿದ್ದು, 1,035 ಹುಡುಗರು ಮತ್ತು 1,055 ಹುಡುಗಿಯರು ಪರೀಕ್ಷಾರ್ಥಿಗಳಾಗಿದ್ದಾರೆ. 169 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 141 ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 1,271 ಹುಡುಗರು ಮತ್ತು 1,329 ಹುಡುಗಿಯರು ಸೇರಿ 2,600 ವಿದ್ಯಾರ್ಥಿಗಳಿದ್ದಾರೆ.

ಅನುದಾನಿತ ಶಾಲೆಗಳಲ್ಲಿ 864 ಹುಡುಗರು ಮತ್ತು 946 ಹುಡುಗಿಯರಿದ್ದು ಒಟ್ಟು 1,810 ಹೊಸ ವಿದ್ಯಾರ್ಥಿಗಳಿದ್ದಾರೆ. 192 ಹುಡುಗರು ಮತ್ತು 78 ಹುಡುಗಿಯರು ಒಟ್ಟು 270 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. 6 ಹುಡುಗರು ಮತ್ತು ಓರ್ವ ವಿದ್ಯಾರ್ಥಿನಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2,087 ವಿದ್ಯಾರ್ಥಿಗಳಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ 688 ಹುಡುಗರು ಮತ್ತು 713 ಹುಡುಗಿಯರಿದ್ದು ಒಟ್ಟು 1,397 ಹೊಸ ವಿದ್ಯಾರ್ಥಿಗಳಿದ್ದಾರೆ. 20 ಹುಡುಗರು ಮತ್ತು 4 ಹುಡುಗಿಯರು ಒಟ್ಟು 24 ಪುನರಾವರ್ತಿತ ವಿದ್ಯಾರ್ಥಿಗಳಿದ್ದು ಒಟ್ಟು 1,421 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ತಾಲೂಕಿನ 16 ಪರೀಕ್ಷಾ ಕೇಂದ್ರಗಳಿಗೆ 16 ಕೇಂದ್ರ ಅಧೀಕ್ಷಕರು, 10 ಉಪ ಅಧೀಕ್ಷಕರು, 16 ಪ್ರಶ್ನೆ ಪತ್ರಿಕೆ ಅಧೀಕ್ಷಕರು, 16 ಸ್ಥಾನಿಕ ವೀಕ್ಷಕರು, ಒಟ್ಟು ಆರು ಮಾರ್ಗಗಳಿಗೆ ಆರು ಮಾರ್ಗಾಧಿಕಾರಿಗಳನ್ನು ನೇಮಿಸಿದ್ದಾರೆ.

ಎಲ್ಲ ಪರೀಕ್ಷಾ ಕೇಂದ್ರಗಳ ಪ್ರತೀ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆಯನ್ನು ಕಲ್ಪಿಸಲು ಸೂಚನೆ ನೀಡಿದ್ದು ಇದಕ್ಕಾಗಿ ಒಟ್ಟು 350 ಕೊಠಡಿ ಮೇಲ್ವಿಚಾರಕರನ್ನು ಅಂತರ್ ಕ್ಲಸ್ಟರ್ ಮಾದರಿಯಲ್ಲಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅತೀ ಅಗತ್ಯದ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪರೀಕ್ಷಾ ಅವ್ಯವಹಾರ ಹಾಗೂ ಅಕ್ರಮವನ್ನು ತಡೆಗಟ್ಟುವ ಸಲುವಾಗಿ ಸೆಕ್ಷನ್ 144, ಸೂಕ್ತ ಪೊಲೀಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರತೀ ಪರೀಕ್ಷಾ ಕೇಂದ್ರದಲ್ಲಿ ವೈದ್ಯಕೀಯ ಸೌಲಭ್ಯವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‌ಎಂಗಳ ಮೂಲಕ ಕಲ್ಪಿಸಲಾಗಿದೆ.

ಎಲ್ಲ ಪರೀಕ್ಷಾ ಕೇಂದ್ರಗಳ ಮೂಲಭೂತ ವ್ಯವಸ್ಥೆಗಳನ್ನು ಪರಿಶೀಲಿಸಲು ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿಯನ್ನು ರಚಿಸಿ, ಪರೀಕ್ಷಾ ಕೇಂದ್ರಗಳ ಪರಿಶೀಲನೆ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅವ್ಯವಹಾರ, ಅಕ್ರಮ ತಡೆಯುವ ಉದ್ದೇಶದಿಂದ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳ ಮುಖ್ಯ ಅೀಕ್ಷಕರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಇಲಾಖಾ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಒಳಪಡಿಸುವ ಬಗ್ಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಎಸೆಸೆಲ್ಸಿ ಪರೀಕ್ಷೆಯು ಪೂರ್ವಾಹ್ನ 9:30ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News