ಮುಲ್ಕಿ ತಾಲೂಕು ರಚನೆಗೆ ಆಗ್ರಹಿಸಿ ಪ್ರತಿಭಟನಾ ಸಭೆ

Update: 2017-03-22 17:46 GMT

ಮುಲ್ಕಿ, ಮಾ.22: ಉಡುಪಿ ಜಿಲ್ಲೆ ರಚನೆಯಾಗುವ ಮೊದಲು ತಾಲೂಕು ರಚನೆಯಾಗದೇ ಇದ್ದುದರಿಂದ ಮುಲ್ಕಿ ತಾಲೂಕು ರಚನೆಗೆ ಹಿನ್ನಡೆಯಾಗಿದೆ. ಮುಲ್ಕಿ ಹೋಬಳಿಯು 36 ಗ್ರಾಮಗಳನ್ನೊಳಗೊಂಡಿದ್ದು, ವಿಶೇಷ ತಹಶೀಲ್ದಾರ್ ನೇಮಕವಾಗಿದೆ. ಇಲ್ಲಿ ರಾಷೀಯ ಹೆದ್ದಾರಿ 66 ಹಾದು ಹೋಗುತ್ತಿದ್ದು, ಇದು ಉಡುಪಿ ಮತ್ತು ಮಂಗಳೂರಿನ ಮಧ್ಯಭಾಗದಲ್ಲಿದೆ. ತಾಲೂಕಾಗಲು ಎಲ್ಲಾ ಅರ್ಹತೆಯನ್ನು ಹೊಂದಿರುವ ಮುಲ್ಕಿಯನ್ನು ಮುಖ್ಯ ಮಂತ್ರಿಯವರು ಕೂಡಲೇ ಮುಲ್ಕಿ ತಾಲೂಕಾಗಿ ಘೋಷಿಸಬೇಕೆಂದು ಮುಲ್ಕಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಆಗ್ರಹಿಸಿದ್ದಾರೆ.

  ಮುಲ್ಕಿ ತಾಲೂಕು ಹೋರಾಟ ಸಮಿತಿಯ ನೇತ್ರತ್ವದಲ್ಲಿ ಮುಲ್ಕಿ ತಾಲೂಕು ರಚನೆಗೆ ಒತ್ತಾಯಿಸಿ ಮುಲಿ ಬಸ್ಸು ನಿಲ್ದಾಣದ ಬಳಿ ಜರಗಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಲ್ಕಿ ಹೋಬಳಿಯ ಜನತೆ ಪ್ರತಿಯೊಂದು ಕಾರ್ಯಕ್ಕೂ ಮಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಮುಲ್ಕಿಯ ತಾಲೂಕು ರಚನೆಗೆ ಕಟ್ಟಡ ನಿರ್ಮಾಣಕ್ಕೆ 1 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ. ವಿಶೇಷ ತಹಶೀಲ್ದಾರ್ ನೇಮಕಗೊಂಡಿದ್ದಾರೆ ಎಂದರು.

 ಅಭಿವೃದ್ದಿಯನ್ನು ಹೊಂದುತ್ತಿರುವ ಮುಲ್ಕಿ ಹೋಬಳಿಗೆ ತಾಲೂಕು ಅತೀ ಅಗತ್ಯವಾಗಿ ಬೇಕಾಗಿದ್ದು, ರಾಜ್ಯ ಸರಕಾರ ಕೂಡಲೇ ಮುಲ್ಕಿ ತಾಲೂಕನ್ನು ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದೆಂದು ಅವರು ಹೇಳಿದರು.

ಸಭೆಯ ಬಳಿಕ ಮುಲ್ಕಿಯ ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್ ರಿಗೆ ಮನವಿಯನ್ನು ಸಲ್ಲಿಸಲಾಯಿತು.

    ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ, ಮಾಜಿ ಅಧ್ಯಕ್ಷ ಬಿ.ಎಂ. ಆಸ್ೀ, ಉಳೆಪಾಡಿ ದಿನೇಶ್ ಹೆಗ್ಡೆ, ಇಕ್ಬಾಲ್ ಅಹ್ಮದ್, ಜೀವನ್ ಶೆಟ್ಟಿ, ಸಾಧು ಅಂಚನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಧನಂಜಯ ಕೋಟ್ಯಾನ್ ಮಟ್ಟು, ಗೋಪಿನಾಥ ಪಡಂಗ, ದೇವಪ್ರಸಾದ್ ಪುನರೂರು, ಸತ್ಯಜಿತ್ ಸುರತ್ಕಲ್, ಹರೀಶ್ ಪುತ್ರನ್, ಅಬ್ದುಲ್ ರಜಾಕ್, ಕೆ ಭುವನಾಭಿರಾಮ ಉಡುಪ ಮತ್ತಿತರಿದ್ದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News