ವೇಷದಲ್ಲಿಯೇ ಬಣ್ಣದ ಬದುಕಿಗೆ ಅಂತ್ಯ ಹಾಡಿದ ಮೇರು ಕಲಾವಿದ

Update: 2017-03-23 11:38 GMT

ಮಂಗಳೂರು, ಮಾ.23: ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸುವಾಗ ಕಲಾವಿದರೊಬ್ಬರು ಕುಸಿದು ಮೃತರಾದ ಘಟನೆ ನಡೆದಿದೆ. ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮೃತ ಕಲಾವಿದ.

ಕಟೀಲು ಮೂರನೆ ಮೇಳದ ಪ್ರಸಿದ್ದ ಹಿರಿಯ ಕಲಾವಿದ, ಮೆನೇಜರ್ ಗೇರುಕಟ್ಟೆ ಗಂಗಯ್ಯ ಶೆಟ್ಟಿ ನಿನ್ನೆ ರಾತ್ರಿ ಎಕ್ಕಾರು ಹತ್ತು ಸಮಸ್ತರ ಕಟೀಲು ಕ್ಷೇತ್ರ ಮಹಾತ್ಮೆ , ಯಲ್ಲಿನ ಅರುಣಾಸುರನ  ಪಾತ್ರ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದರು.  ನಂತರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದಾದರೂ ಚೇತರಿಸದೆ ನಿಧನರಾದರು.

ಪರಿಚಯ: 

ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ಯಕ್ಷರಂಗವನ್ನು ಪ್ರವೇಶಿಸಿ ಕಟೀಲು ಮೇಳದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕಟೀಲು ಮೇಳದಲ್ಲಿ ಸುಪ್ರಸಿದ್ದ ಬಣ್ಣದ ವೇಷಧಾರಿ ಬಣ್ಣದ ಕುಟ್ಯಪುರವರ ಒಡನಾಟದಲ್ಲಿ ಬಣ್ಣದ ವೇಷದತ್ತ ಆಕರ್ಷಿತರಾದ ಗಂಗಯ್ಯ ಶೆಟ್ಟರು ಬಣ್ಣದ ವೇಷಗಳ ಸೂಕ್ಷ್ಮತೆ ಹಾಗೂ ರಂಗದ ನಡೆಯನ್ನು ಕಲಿತಿದ್ದರು.

ಮುಂದೆ ಮಹಿಷಾಸುರ ವೇಷದ ಮೂಲಕ ಯಕ್ಷಗಾನ ರಂಗದಲ್ಲಿ ಪ್ರಸಿದ್ದ ಕಲಾವಿದರಾಗಿ ಮಿಂಚಿ ತನ್ನದೇ ಆದ ಛಾಪು ಮೂಡಿಸಿ ರಂಗದಲ್ಲಿ ಮೆರೆದ ಕಲಾವಿದರಾಗಿದ್ದಾರೆ. ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳ ಆಳವಾದ ಜ್ಞಾನ ಹೊಂದಿದ್ದ ಶೆಟ್ಟರು ಮಹಿಷಾಸುರ ಪಾತ್ರದೊಂದಿಗೆ ರುದ್ರಭೀಮ, ಅರುಣಾಸುರ, ರಾವಣ, ಮೈರಾವಣ, ವೀರಭದ್ರ, ಚಂದಗೋಪ, ಶನೈಶ್ವರ, ಕೌಂಡ್ಲಿಕ ಹೀಗೆ ಪೌರಾಣಿಕ ಪ್ರಸಂಗಗಳ ಪ್ರಮುಖ ಖಳ ಪಾತ್ರಗಳಿಗೆ ಜೀವತುಂಬಿದ್ದಾರೆ.

ಅಲ್ಲದೆ ರುದ್ರಭೀಮ ಪಾತ್ರಕ್ಕೆ ಹೊಸ ಆಯಾಮ ಕೊಟ್ಟವರೇ ಗಂಗಯ್ಯ ಶೆಟ್ಟರು. ಪಾತ್ರಕ್ಕೆ ಒಪ್ಪುವ ಒಳ್ಳೆಯ ಮುಖವರ್ಣಿಕೆ, ರಂಗದಲ್ಲಿ ಪಾತ್ರ, ಔಚಿತ್ಯಕ್ಕೆ ತಕ್ಕುದಾದ ಏರುಧ್ವನಿಯ ಮಾತುಗಾರಿಕೆ, ಸಂದರ್ಭಾನುಸಾರ ಭಕ್ತಿ, ತನ್ಮಯತೆ, ಹದವಾದ ನಾಟ್ಯ ಗಂಗಯ್ಯ ಶೆಟ್ಟರ ಕಲಾ ಪ್ರತಿಭೆಯ ಬಹುಮುಖಗಳಿಗೆ ಸಾಕ್ಷಿಯಾಗಿದೆ.

ಸುಮಾರು 48 ವರ್ಷಗಳಿಂದ ಕಟೀಲು ಮೇಳವೊಂದರಲ್ಲೇ ಕಲಾವಿದರಾಗಿ ಸೇವೆಗೈದ ಗೇರುಗಟ್ಟೆ ಗಂಗಯ್ಯ ಶೆಟ್ಟರ ವೃತ್ತಿನಿಷ್ಠೆ ಮತ್ತು ಕಲಾನಿಷ್ಠೆ ಅಭಿನಂದನೀಯ. ಅಲ್ಲದೆ ಕಟೀಲಿನ ಮೂರನೇ ಮೇಳದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದ್ದರು. ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದ ಅವರು ನೂರಾರು ಕಡೆ ವಿವಿಧ ಸಂಘ ಸಂಸ್ಥೆಗಳ ಸಮ್ಮಾನಗಳನ್ನು ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2013 ನೇ ಸಾಲಿನ‘ಯಕ್ಷಮಂಗಳ ಪ್ರಶಸ್ತಿಗೂ ಗೇರುಕಟ್ಟೆ ಗಂಗಯ್ಯ ಶೆಟ್ಟರು ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News