ಯುಎಇ, ಕತರ್ ಸಹಿತ ಹತ್ತು ದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ 'ಅಮೇರಿಕ ವಿಮಾನದಲ್ಲಿ' ನಿಷೇಧ

Update: 2017-03-23 06:17 GMT

ಹೊಸದಿಲ್ಲಿ, ಮಾ.23: ಯುಎಇ, ಕತರ್ ಮುಂತಾದ ಹತ್ತು ದೇಶಗಳಿಂದ ಇಲೆಕ್ಟ್ರಾನಿಕ್ ಉಪಕರಣಗಳಿಗೆ ಅಮೇರಿಕ ವಿಮಾನಗಳಲ್ಲಿ ಹೇರಿರುವ ನಿಷೇಧವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮುಖ್ಯವಾಗಿ ನಷ್ಟದಲ್ಲಿರುವ ಏರ್ ಇಂಡಿಯಾಗೆ ಭಾರೀ ವರದಾನವಾಗುವ ಸಾಧ್ಯತೆಯಿದೆ.ಅಮೇರಿಕ ಹೇರಿರುವ ನಿರ್ಬಂಧವು ಭಾರತದಿಂದ ಹೊರಡುವ ವಿಮಾನಗಳಿಗೆ ಹಾಗೂ ನಿರ್ಬಂಧ ಹೇರಲ್ಪಟ್ಟ ದೇಶಗಳಲ್ಲಿ ನಿಲುಗಡೆಯಿಲ್ಲದ ವಿಮಾನಗಳಿಗೆ ಅನ್ವಯಿಸುವುದಿಲ್ಲ.

ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಹೊಸ ಆದೇಶದನ್ವಯ ಮಧ್ಯ ಪೂರ್ವ ಹಾಗೂ ಉತ್ತರ ಆಫ್ರಿಕಾದ 10 ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳಲ್ಲಿ ಐಪ್ಯಾಡ್ ಹಾಗೂ ಲ್ಯಾಪ್ ಟಾಪ್‌ಗಳನ್ನು ಅಮೇರಿಕಾಕ್ಕೆ ಕೊಂಡೊಯ್ಯುವ ಹಾಗಿಲ್ಲ.

‘‘ಆದರೆ ಭಾರತದಿಂದ ನ್ಯೂಯಾರ್ಕ್, ನೇವಾರ್ಕ್, ಚಿಕಾಗೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರತಿ ದಿನ ನಾಲ್ಕು ನಿಲುಗಡೆರಹಿತ ವಿಮಾನ ಸೇವೆ ಒದಗಿಸುವ ಏರ್ ಇಂಡಿಯಾ ಇದರಿಂದ ಅಬಾಧಿತ,’’ ಎಂದ ಸಂಸ್ಥೆಯ ಹಣಕಾಸು ನಿರ್ದೇಶಕ ವಿನೋದ್ ಹೆಜಮಾಡಿ ಹೇಳಿದ್ದಾರೆ.

‘‘ಅಹ್ಮದಾಬಾದ್ ನಗರದಿಂದ ಲಂಡನ್ನಿಗೆ ನೇವಾರ್ಕ್ ಮುಖಾಂತರ ಸಾಗುವ ನಮ್ಮ ಏಕ ನಿಲುಗಡೆ ವಿಮಾನ ನೇವೆಗೂ ಇದು ಅನ್ವಯವಾಗುವುದಿಲ್ಲ,’’ ಎಂದು ಅವರು ಮಾಹಿತಿ ನೀಡಿದ್ದಾರೆ.

                                                                   

ಅಮೇರಿಕಾದ ಈ ಹೊಸ ಆದೇಶ ಜಾರಿಯಾಗುತ್ತಿದ್ದಂತೆಯೇ ಪಶ್ಚಿಮ ಏಷ್ಯಾದ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸುವ ನೂರಾರು ಭಾರತೀಯರು ತಮ್ಮ ತಾಯ್ನಾಡಿನ ವಿಮಾನಯಾನ ಸೇವೆಗಳನ್ನೇ ಅವಲಂಬಿಸುವ ಸಾಧ್ಯತೆಯಿದೆ.

‘‘ಭಾರತದ ದೃಷ್ಟಿಯಿಂದ ಪರಿಗಣಿಸಿದರೆ ಅಮೇರಿಕದ ಈ ಹೊಸ ನಿರ್ಬಂಧವು ಭಾರತದ ವಾಯುಸೇವೆ ಸಂಸ್ಥೆಗಳಾದ ಜೆಟ್ ಏರ್ ವೇಸ್ ಮತ್ತು ಏರ್ ಇಂಡಿಯಾಗೆ ಲಾಭವಾಗಲಿದೆ. ನಿರ್ಬಂಧ ಹೇರಲ್ಪಟ್ಟ ಸಾಧನಗಳನ್ನು ಉಪಯೋಗಿಸಲು ಅನುಮತಿಸುವ ಏರ್ ಲೈನ್ ಗಳನ್ನು ಪ್ರಯಾಣಿಕರು ಸಹಜವಾಗಿ ಆಯ್ಕೆ ಮಾಡುತ್ತಾರೆ,’’ ಎಂದು ಯಾತ್ರಾ ಸಿಒಒ ಶರತ್ ಧಲ್‌ ಹೇಳಿದ್ದಾರೆ.

ಹೊಸದಿಲ್ಲಿಯಿಂದ ಅಮೇರಿಕಾದ ವಿವಿಧ ನಗರಗಳಿಗೆ ಪ್ರತಿ ದಿನ 30,000 ಮಂದಿ ಪ್ರಯಾಣಿಸುತ್ತಾರೆ. ಏರ್ ಇಂಡಿಯಾ ಈ ವರ್ಷದ ಜುಲೈ ತಿಂಗಳಿನಿಂದ ಹೊಸದಿಲ್ಲಿ-ವಾಷಿಂಗ್ಟನ್ ನಡುವೆ ಮತ್ತೊಂದು ನಿಲುಗಡೆರಹಿತ ವಿಮಾನ ಸೇವೆ ಒದಗಿಸಲಿದೆ.

ಏರ್ ಇಂಡಿಯಾ ಹೆಚ್ಚಾಗಿ ಅಮೇರಿಕಾದ ನಗರಗಳಿಗೆ ಸೇವೆಯೊದಗಿಸಲು ತನ್ನ ಬೋಯಿಂಗ್ 777 ಉಪಯೋಗಿಸುತ್ತಿದ್ದು ಇದು ಭಾರತೀಯ ಸಮುದಾಯದಲ್ಲಿ ಜನಪ್ರಿಯವಾಗಿದೆ. ಮೇಲಾಗಿ ಪ್ರತಿ ವಿಮಾನದ ಶೇ 80ರಷ್ಟು ಸೀಟುಗಳು ಭರ್ತಿಯಾಗಿರುತ್ತವೆ.

ಅಮೇರಿಕಾದ ಹೊಸ ನಿಯಮದ ಪ್ರಕಾರ ಮುಸ್ಲಿಮರು ಹೆಚ್ಚಾಗಿ ವಾಸಿಸುವ ದೇಶಗಳ ಹತ್ತು ವಿಮಾನ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ತಮ್ಮೊಂದಿಗೆ ತರುವ ಟ್ಯಾಬ್ಲೆಟ್ ಗಳು, ಲ್ಯಾಪ್ ಟಾಪ್, ಕ್ಯಾಮರಾಗಳನ್ನು ಚೆಕ್-ಇನ್ ಲಗೇಜುಗಳಲ್ಲಿಯೇ ಇಡಬೇಕಾಗಿದೆ. ಈ ನಿರ್ಧಾರ ವಾರವೊಂದರಲ್ಲಿ ಸುಮಾರು 350 ವಿಮಾಣ ಸೇವೆಗಳನ್ನು ಬಾಧಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News