ಶೂಟಿಂಗ್ ವಿಶ್ವಕಪ್: ಅಂಕುರ್ ಮಿತ್ತಲ್‌ಗೆ ಚಿನ್ನದ ಪದಕ

Update: 2017-03-23 06:40 GMT

 ಅಕಾಪುಲ್ಕೊ, ಮಾ.23: ಭಾರತದ ಯುವ ಶೂಟರ್ ಅಂಕುರ್ ಮಿತ್ತಲ್ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಡಬಲ್ ಟ್ರಾಪ್ ವಿಭಾಗದಲ್ಲಿ ಎದುರಾಳಿ ಜೇಮ್ಸ್ ವಿಲೆಟ್‌ರನ್ನು ಮಣಿಸಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ. ಇದು ವಿಶ್ವಕಪ್‌ನಲ್ಲಿ ಮಿತ್ತಲ್‌ಗೆ ಲಭಿಸಿದ ಚೊಚ್ಚಲ ಚಿನ್ನದ ಪದಕವಾಗಿದೆ.

24ರ ಹರೆಯದ ಅಂಕುರ್ ಮಿತ್ತಲ್ 75 ಅಂಕ ಗಳಿಸಿದ್ದು, ಈ ಮೂಲಕ ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಸ್ಪರ್ಧೆಯಲ್ಲಿ ವಿಲೆಟ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸರಿದೂಗಿಸಿದರು. ಈ ಬಾರಿ 21ರ ಹರೆಯದ ವಿಲೆಟ್ ಒಟ್ಟು 73 ಅಂಕ ಗಳಿಸಿದ್ದಾರೆ.

‘‘ಇದು ಸೇಡಿನ ಪಂದ್ಯವೆಂದು ಹೇಳಲಾರೆ. ಜೇಮ್ಸ್ ಓರ್ವ ಶ್ರೇಷ್ಠ ಶೂಟರ್. ಗೆಲುವು-ಸೋಲು ಎಲ್ಲ ಪಂದ್ಯಗಳಲ್ಲಿ ಸಾಮಾನ್ಯವಾಗಿದೆ. ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಬಲವಾಗಿ ಬೀಸುತ್ತಿದ್ದ ಗಾಳಿಯಿಂದ ಸಮಸ್ಯೆಯಾಗಿತ್ತು. ಆದರೆ, ಮಧ್ಯಾಹ್ನದ ವೇಳೆ ಎಲ್ಲವೂ ಸರಿಯಾಗಿತ್ತು. ಇಬ್ಬರು ಯುವ ಶೂಟರ್‌ಗಳೊಂದಿಗೆ ಪದಕ ಸ್ವೀಕರಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಶೂಟಿಂಗ್ ಯುವಕರ ಕ್ರೀಡೆ’’ ಎಂದು ಮಿತ್ತಲ್ ಪದಕ ಪ್ರದಾನ ಸಮಾರಂಭದಲ್ಲಿ ತಿಳಿಸಿದ್ದಾರೆ.

ಅಂಕುರ್ ಮಿತ್ತಲ್ ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಪುರುಷರ ಡಬಲ್ ಟ್ರಾಪ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News