ಕೇರಳ ಚಿನ್ನಾಭರಣ ವ್ಯಾಪಾರಿಯ ದರೋಡೆ ಪ್ರಕರಣ: ಜ್ಯುವೆಲ್ಲರಿ ಮಾಲಕ ಸಹಿತ ಏಳು ಮಂದಿ ಬಂಧನ

Update: 2017-03-23 15:41 GMT

ಉಡುಪಿ, ಮಾ.23: ಕೇರಳ ತ್ರಿಶೂರಿನ ಚಿನ್ನಾಭರಣ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರ್ಡೂರಿನ ಜ್ಯುವೆಲ್ಲರಿ ಮಾಲಕ ಸಹಿತ ಏಳು ಮಂದಿಯನ್ನು ಉಡುಪಿ ಪೊಲೀಸರು ಬಂಧಿಸಿ, ಚಿನ್ನಾಭರಣ, ನಗದು ಹಾಗೂ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಈ ಕುರಿತು ಮಾಹಿತಿ ನೀಡಿದರು. ಪೆರ್ಡೂರು ಗಾಯತ್ರಿ ಜ್ಯುವೆಲ್ಲರಿ ಮಾಲಕ, ಶಿರೂರು ಗ್ರಾಮದ ಹರಿಖಂಡಿಗೆ ಉಗ್ರಾಣಿಬೆಟ್ಟುವಿನ ಹರಿಕೃಷ್ಣ ಭಟ್(25), ಕುಂದಾಪುರ ಹೆಮ್ಮಾಡಿಯ ಮಹಮ್ಮದ್ ಇರ್ಫಾನ್(30), ಹೆಮ್ಮಾಡಿ ಸಂತೋಷ್ ನಗರದ ಇಲಾಹಿದ್ (24), ಮಲ್ಪೆ ಕೊಳ ನಿವಾಸಿ ಜಾವೇದ್(25), ಬೆಳಪು ಮಸೀದಿ ಬಳಿ ವಿನಯ ನಗರದ ಅಶ್ರಫ್(34), ಕುಂದಾಪುರ ಕೆರ್ಗಲ್ನ ರವಿಚಂದ್ರ ಯಾನೆ ರವಿ(41), ಕಿರಿಮಂಜೇಶ್ವರದ ಸುಮಂತ ಕುಮಾರ(24) ಬಂಧಿತ ಆರೋಪಿಗಳು.

ಹರಿಕೃಷ್ಣನಿಂದ ಪ್ಲಾನ್: ಹರಿಕೃಷ್ಣ ಭಟ್‌ನ ಗಾಯತ್ರಿ ಜ್ಯುವೆಲ್ಲರಿಗೆ ತ್ರಿಶೂರಿನ ದಿಲೀಪ್ ಟಿ.ಡಿ. ಹಲವು ವರ್ಷಗಳಿಂದ ಚಿನ್ನಾಭರಣ ಮಾರಾಟ ಮಾಡಲು ಬರುತ್ತಿದ್ದು, ಚಿನ್ನಾಭರಣ ಹಾಗೂ ಮಾರಾಟ ಮಾಡಿದ ಹಣ ವನ್ನು ದಿಲೀಪ್ ಒಬ್ಬರೇ ತೆಗೆದುಕೊಂಡು ಹೋಗುವ ವಿಚಾರವೂ ಹರಿಕೃಷ್ಣಗೆ ತಿಳಿದಿತ್ತು. ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದ ಹರಿಕೃಷ್ಣ ತನ್ನ ಗೆಳೆಯನ ಸಲಹೆ ಮೇರೆಗೆ ದಿಲೀಪ್‌ನನ್ನು ದೋಚಲು ಯೋಜನೆ ರೂಪಿಸಿದ್ದನು.

ದಿಲೀಪ್‌ರ ವ್ಯವಹಾರಕ್ಕೆ ಯಾವುದೇ ದಾಖಲೆಗಳಿಲ್ಲದಿರುವುದರಿಂದ ಯಾವುದೇ ಪೊಲೀಸ್ ದೂರು ದಾಖಲಾಗುವುದಿಲ್ಲ ಎಂದು ಭಾವಿಸಿ ಹರಿ ಕೃಷ್ಣ ಈ ಕೃತ್ಯ ನಡೆಸಲು ಮುಂದಾದನು. ಅದಕ್ಕಾಗಿ ಆತ ಇರ್ಫಾನ್‌ನನ್ನು ಭೇಟಿಯಾಗಿ ಡೀಲ್ ಕುದುರಿಸಿದನು. ಅದರಂತೆ ಮಾ.17ರಂದು ಪೆರ್ಡೂರು, ಹಿರಿಯಡ್ಕದ ಜ್ಯುವೆಲ್ಲರಿಗಳಿಗೆ ಚಿನ್ನಾಭರಣಗಳನ್ನು ಮಾರಾಟ ಮಾಡಿ ಸಂಜೆ ಉಳಿದ ಚಿನ್ನಾಭರಣ ಹಾಗೂ ಹಣದೊಂದಿಗೆ ಹಿರಿಯಡ್ಕದಲ್ಲಿ ಬಸ್‌ನಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ದಿಲೀಪ್‌ನನ್ನು ಇರ್ಫಾನ್ ತಂಡ ಕಾರಿನಲ್ಲಿ ಹಿಂಬಾಲಿಸಿತು. ಅವರಲ್ಲಿ ಮೂವರು ಬಸ್ ಹತ್ತಿ ಮುಂದೆ ಮಣಿಪಾಲ ಡೌನ್‌ಟೌನ್ ಬಾರ್ ಬಳಿ ದಿಲೀಪ್‌ನನ್ನು ಬಸ್‌ನಿಂದ ಬಲತ್ಕಾರವಾಗಿ ಇಳಿಸಿತು. ಅಲ್ಲಿಂದ ಇಡೀ ತಂಡ ದಿಲೀಪ್‌ನನ್ನು ಕಾರಿನಲ್ಲಿ ಅಪಹರಿಸಿತು. ಇದಕ್ಕಾಗಿ ಆರೋಪಿಗಳು ಮೂರು ಬಾಡಿಗೆ ಕಾರುಗಳನ್ನು ಬಳಸಿಕೊಂಡಿದ್ದರು.

ಕಾರಿನಲ್ಲಿ ಇಲಾಹಿದ್ ನೈಜ ಪಿಸ್ತೂಲ್ನಂತೆ ಇರುವ ಆಟಿಕೆಯ ಪಿಸ್ತೂಲ್ ನ್ನು ದಿಲೀಪ್‌ಗೆ ತೋರಿಸಿ ಪೊಲೀಸ್ ಎಂಬುದಾಗಿ ಹೆದರಿಸಿದನು. ಆತನಲ್ಲಿದ್ದ ಸುಮಾರು 1500ಗ್ರಾಂ ಚಿನ್ನಾಭರಣ ಹಾಗೂ 2,57,200ರೂ. ನಗದು ದರೋಡೆ ಮಾಡಿದ ತಂಡ, ಬಳಿಕ ದಿಲೀಪ್‌ರನ್ನು ಪಡುಬಿದ್ರಿ ಸಮೀಪದ ನಂದಿಕೂರು ಬಳಿ ಇಳಿಸಿ ಪರಾರಿಯಾಯಿತು.

ಕ್ಷಿಪ್ರ ಕಾರ್ಯಾಚರಣೆ:

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಂತ ಗಂಭೀರ ಸ್ವರೂಪದ ಪ್ರಕರಣದ ತನಿಖೆ ಗಾಗಿ ಐದು ತಂಡಗಳನ್ನು ರಚಿಸಿ ತನಿಖೆ ನಡೆಸಲಾಯಿತು. ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಇವರಿಂದ ದರೋಡೆ ಮಾಡಿದ್ದ 876 ಗ್ರಾಂ ತೂಕದ 24,00,000ರೂ. ಮೌಲ್ಯದ ಚಿನ್ನಾಭರಣ, 60,000 ನಗದು ಹಾಗೂ ಕೃತ್ಯಕ್ಕೆ ಬಳಸಿದ 2 ರಿಟ್ಜ್ ಹಾಗೂ ಒಂದು ಚೆವರ್ಲೆಟ್ ಸೀಲ್ ಕಾರನ್ನು ವಶಪಡಿಸಿ ಕೊಂಡಿತು.

 ಈ ತಂಡಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹರಿ ಶೇಖರನ್ ನಗದು ಬಹುಮಾನ ಘೋಷಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲ ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

  ಈ ಕಾರ್ಯಾಚರಣೆಯನ್ನು ಎಸ್ಪಿ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ ಮತ್ತು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕಾಪು ವೃತ್ತ ನಿರೀಕ್ಷಕ ವಿ.ಎಸ್.ಹಾಲ ಮೂರ್ತಿ, ಹಿರಿಯಡ್ಕ ಎಸ್ಸೈ ವಿನಾಯಕ ಬಿಲ್ಲವ, ಪಡುಬಿದ್ರಿ ಎಸ್ಸೈ ಸತೀಶ್, ಎಎಸ್ಸೈಗಳಾದ ಶ್ರೀಧರ ನಂಬಿಯಾರ್, ರೊಸಾರಿಯೊ ಡಿಸೋಜ, ಸಿಬ್ಬಂದಿ ಗಳಾದ ರವಿಚಂದ್ರ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ, ರಾಘವೇಂದ್ರ ಉಪ್ಪುಂದ, ಪ್ರವೀಣ, ಶಿವಾನಂದ, ರಾಜಕುಮಾರ್, ದಯಾನಂದ ಪ್ರಭು, ಚಾಲಕ ರಾಘವೇಂದ್ರ, ಶಿವಾನಂದ ಶೆಟ್ಟಿ, ನಿತಿನ್, ದಿನೇಶ ನಡೆಸಿದ್ದಾರೆ.

ದರೋಡೆ ಹಣ ಹಂಚಿಕೆ:

ದರೋಡೆಗೈದ ಚಿನ್ನಾಭರಣವನ್ನು ಕರಗಿಸಿದ ಆರೋಪಿಗಳು ಬಳಿಕ ಅದನ್ನು ಮಾರಾಟ ಮಾಡಿದ್ದರು. ಮಾರಾಟ ಮಾಡಿ ಬಂದ 24ಲಕ್ಷ ರೂ. ಹಣದಲ್ಲಿ ಹರಿಕೃಷ್ಣ ಭಟ್ ಮತ್ತು ಇರ್ಫಾನ್ ತಲಾ ಐದು ಲಕ್ಷ ರೂ.ನಂತೆ ಹಾಗೂ ಉಳಿದ ಹಣವನ್ನು ಉಳಿದ ಐವರು ಆರೋಪಿಗಳಿಗೆ ಹಂಚಿದ್ದರು ಎಂದು ಎಸ್ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಇರ್ಫಾನ್ ವಿರುದ್ಧ ಭಟ್ಕಳದಲ್ಲಿ ಒಂದು ಪ್ರಕರಣ, ರವಿಚಂದ್ರ ವಿರುದ್ಧ ಸುಮಾರು ಎಂಟು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾ ಗಿವೆ. ಈ ಪ್ರಕರಣದಲ್ಲಿ ಹರಿಕೃಷ್ಣ ಭಟ್‌ಗೆ ಸಲಹೆ ನೀಡಿದ ಆತನ ಗೆಳೆಯ ಸೇರಿದಂತೆ ಇನ್ನು ಕೆಲವು ಆರೋಪಿಗಳನ್ನು ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು.

ಚಿನ್ನಾಭರಣ ಮಾರಾಟ ದಂಧೆ?

ತನಿಖೆ ವೇಳೆ ಹೆಚ್ಚಿನ ವಿಚಾರಣೆಯಿಂದ ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ ಹಲವು ಮಾಹಿತಿ ಸಂಗ್ರಹ ಮಾಡಲಾಗಿದ್ದು, ಈ ರೀತಿ ಹಲವಾರು ವ್ಯಾಪಾರಿ ಗಳು ಕೇರಳ ರಾಜ್ಯದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಚಿನ್ನದ ಅಂಗಡಿಗಳಿಗೆ ಆಭರಣಗಳನ್ನು ಸರಬರಾಜು ಮಾಡಿ ಹಣ ಪಡೆಯುವ ವ್ಯವಹಾರ ನಡೆಸುತ್ತಿದ್ದಾರೆ. ಈ ವ್ಯಾಪಾರ ಕಾನೂನು ಬದ್ಧವಾಗಿರುವ ಬಗ್ಗೆ ಈಗಾಗಲೇ ದಾಖಲೆಗಳನ್ನು ಸಲ್ಲಿಸುವಂತೆ ದಿಲೀಪ್ ಮತ್ತು ಇತರ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ಕೆ.ಟಿ.ಬಾಲಕೃಷ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News