ಗೆಲುವಿನೊಂದಿಗೆ ಫುಟ್ಬಾಲ್‌ಗೆ ವಿದಾಯ ಹೇಳಿದ ಜರ್ಮನಿಯ ಪೊಡೊಲ್‌ಸ್ಕಿ

Update: 2017-03-23 09:40 GMT

ಬರ್ಲಿನ್, ಮಾ.23: ಏಕೈಕ ಗೋಲು ಬಾರಿಸಿ ಆತಿಥೇಯ ತಂಡವನ್ನು ಗೆಲುವಿನ ದಡ ಸೇರಿಸಿದ ಜರ್ಮನಿಯ ಆಟಗಾರ ಲುಕಾಸ್ ಪೊಡೊಲ್‌ಸ್ಕಿ ತನ್ನದೇ ಶೈಲಿಯಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದರು.

ಬುಧವಾರ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಗೆಲುವಿನ ಗೋಲು ಬಾರಿಸಿದ ಪೊಡೊಲ್‌ಸ್ಕಿ ಜರ್ಮನಿಗೆ 1-0 ಅಂತರದ ಗೆಲುವು ತಂದುಕೊಟ್ಟರು.

130ನೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ಪೊಡೊಲ್‌ಸ್ಕಿ 49ನೆ ಗೋಲು ಬಾರಿಸಿದರು.

‘‘ಇದು ನನಗೆ ಒಂದು ಸಿನಿಮಾ ರೀತಿ ಕಾಣಿಸಿತು. ದೇವರು ನನಗೆ ಬಲಶಾಲಿ ಎಡಗಾಲು ಕರುಣಿಸಿದ್ದಾನೆ. ಹೀಗಾಗಿ ತನ್ನ ಕೊನೆಯ ಪಂದ್ಯದಲ್ಲಿ ನನ್ನ ತಂಡದ ಪರ ವಿಜಯಿ ಗೋಲು ಬಾರಿಸಲು ಸಾಧ್ಯವಾಯಿತು. ಇದೊಂದು ಸ್ಮರಣೀಯ ಪಂದ್ಯ. ಶ್ರೇಷ್ಠ ಫಲಿತಾಂಶ. ಫುಟ್ಬಾಲ್‌ಗೆ ವಿದಾಯದ ರೀತಿಯು ನನಗೆ ಖುಷಿಕೊಟ್ಟಿದೆ ಎಂದು 31ರಹರೆಯದ ಪೊಡೊಲ್‌ಸ್ಕಿ ಹೇಳಿದ್ದಾರೆ.

1987ರ ಬಳಿಕ ಸ್ವದೇಶಿ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿರುವ ಜರ್ಮನಿ ತಂಡಕ್ಕೆ ಪೊಡೊಲ್‌ಸ್ಕಿ ಮೊದಲ ಬಾರಿ ನಾಯಕತ್ವವಹಿಸಿಕೊಂಡಿದ್ದರು. 13 ವರ್ಷಗಳ ಅಂತಾರಾಷ್ಟ್ರೀಯ ಫುಟ್ಬಾಲ್ ಜೀವನಕ್ಕೆ ತೆರೆ ಎಳೆದ ಪೊಡೊಲ್‌ಸ್ಕಿ ಪಂದ್ಯಪೂರ್ವ ಸಮಾರಂಭದ ವೇಳೆ ಸ್ಮರಣಿಕೆ ಪಡೆದರು. ಈ ವೇಳೆ ನೆರೆದಿದ್ದ ಜನರು ಎದ್ದುನಿಂತು ಗೌರವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News