ಎನ್‌ಜಿಒಗೆ ಅನುಮತಿ ನೀಡುವಂತೆ 107 ಅಮೆರಿಕನ್ ಸಂಸದರ ಮನವಿ
ವಾಶಿಂಗ್ಟನ್, ಮಾ. 23: ಅಮೆರಿಕದ ಸರಕಾರೇತರ ಸಂಸ್ಥೆ (ಎನ್‌ಜಿಒ) ‘ಕಂಪ್ಯಾಶನ್ ಇಂಟರ್‌ನ್ಯಾಶನಲ್’ ಭಾರತದಲ್ಲಿ ಕಾರ್ಯಾಚರಿಸಲು ಸಾಧ್ಯವಾಗುವಂತೆ ಭಾರತೀಯ ಕಾನೂನಿನಡಿ ಖಾಯಂ ಪರಿಹಾರವೊಂದನ್ನು ಕಂಡುಹಿಡಿಯುವವರೆಗೆ, ತಾತ್ಕಾಲಿಕವಾಗಿ ಕಾರ್ಯಾಚರಿಸಲು ಅನುಮತಿ ನೀಡುವಂತೆ 100ಕ್ಕೂ ಅಧಿಕ ಅಮೆರಿಕ ಸಂಸದರು ಭಾರತವನ್ನು ಕೋರಿದ್ದಾರೆ.
ಈ ಸಂಸ್ಥೆಯನ್ನು ‘ಮುಂಚಿತವಾಗಿ ಅನುಮತಿ ಪಡೆಯಬೇಕಾದ ವಿಭಾಗ’ಕ್ಕೆ ಕೇಂದ್ರ ಸರಕಾರವು ಕಳೆದ ವರ್ಷದ ಮೇ ತಿಂಗಳಲ್ಲಿ ಸೇರಿಸಿತ್ತು. ಹಾಗಾಗಿ, ಅದು ತನ್ನ ಭಾರತೀಯ ಕಚೇರಿಯನ್ನು ಮುಚ್ಚುತ್ತಿದೆ.
ದಾನಿ ಸಂಸ್ಥೆಯೊಂದನ್ನು ಈ ವಿಭಾಗಕ್ಕೆ ಸೇರಿಸಿದರೆ, ಸರಕಾರದ ಅನುಮತಿಯಿಲ್ಲದೆ ಯಾವುದೇ ಭಾರತೀಯ ಎನ್‌ಜಿಒಗೆ ಅದು ಆರ್ಥಿಕ ನೆರವು ನೀಡುವಂತಿಲ್ಲ.
ಅಮೆರಿಕದಿಂದ ಮನವಿಗಳು ಬಂದ ಹೊರತಾಗಿಯೂ, ಈ ನಿರ್ಧಾರವನ್ನು ಮರುಪರಿಶೀಲಿಸುವುದು ಅಸಾಧ್ಯ ಎಂಬುದಾಗಿ ಗೃಹ ಸಚಿವಾಲಯ ಡಿಸೆಂಬರ್‌ನಲ್ಲಿ ಹೇಳಿತ್ತು. ಅಮೆರಿಕದ ಸಂಸ್ಥೆಯು ಧಾರ್ಮಿಕ ಮತಾಂತರದಲ್ಲಿ ತೊಡಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅದರ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗಿತ್ತು.
ಪ್ರಭಾವಿ ‘ಸದನ ವಿದೇಶಿ ಸಂಬಂಧಗಳ ಸಮಿತಿ’ಯ ಅಧ್ಯಕ್ಷ ಎಡ್ ರಾಯ್ಸ ಮತ್ತು ಸಮಿತಿಯ ಸದಸ್ಯ ಎಲಿಯಟ್ ಎಂಜೆಲ್ ಸೇರಿದಂತೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ 107 ಸಂಸದರು, ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.
‘‘ಕ್ರಿಶ್ಚಿಯನ್ ದತ್ತಿ ಸಂಘಟನೆಯು ಭಾರತದಲ್ಲಿ ತನ್ನ ಕಾರ್ಯಕ್ರಮಗಳ ಮೂಲಕ, 1.45 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಟ್ಯೂಶನ್, ಪೌಷ್ಟಿಕಾಂಶ ಮತ್ತು ವೈದ್ಯಕೀಯ ಸೇವೆಗಳನ್ನು ನೀಡುತ್ತಿದೆ. ಈಗ ತನ್ನ ಕಾರ್ಯಕ್ರಮಗಳನ್ನು ಮುಚ್ಚುವಂತೆ ಅದರ ಮೇಲೆ ಒತ್ತಡ ಹೇರಲಾಗುತ್ತಿದೆ’’ ಎಂದು ಪತ್ರ ಹೇಳಿದೆ.