ಅಫ್ಘಾನ್ : ಸಂಗಿನ್ ಜಿಲ್ಲೆ ತಾಲಿಬಾನ್ ವಶಕ್ಕೆ
ಕಾಬೂಲ್, ಮಾ. 23: ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತದ ಆಯಕಟ್ಟಿನ ಸಂಗಿನ್ ಜಿಲ್ಲೆಯನ್ನು ತಾಲಿಬಾನ್ ಬಂಡುಕೋರರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಅತಿ ಹೆಚ್ಚು ಅಫೀಮು ಬೆಳೆಯುವ ರಾಜ್ಯ ಹೆಲ್ಮಂಡ್‌ನ ಹೆಚ್ಚಿನ ಭಾಗಗಳು ಈಗಾಗಲೇ ತಾಲಿಬಾನಿಗಳ ಕೈಯಲ್ಲಿವೆ. ಆದರೆ, ಸಂಗಿನ್ ಜಿಲ್ಲೆಯನ್ನು ವಶಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರುವುದು ದೇಶದ ದಕ್ಷಿಣ ಭಾಗದಲ್ಲಿ ಅವರ ಹೆಚ್ಚುತ್ತಿರುವ ಪ್ರಾಬಲ್ಯವನ್ನು ತೋರಿಸುತ್ತದೆ. ಸಂಗಿನ್ ಜಿಲ್ಲೆಯಲ್ಲಿ ಅಮೆರಿಕ ಮತ್ತು ಬ್ರಿಟಿಶ್ ಪಡೆಗಳು ಭಾರೀ ಸಾವು ನೋವು ಅನುಭವಿಸಿವೆ.
ತಾಲಿಬಾನ್ ಹೋರಾಟಗಾರರು ಬುಧವಾರ ರಾತ್ರಿ ಪೊಲೀಸ್ ಪ್ರಧಾನ ಕಚೇರಿ ಮತ್ತು ಸೇನಾ ನೆಲೆಯೊಂದನ್ನು ವಶಪಡಿಸಿಕೊಂಡಿದ್ದಾರೆ. ಹಿಂದಕ್ಕೆ ಸರಿದ ಸರಕಾರಿ ಪಡೆಗಳು ತೊರೆದು ಹೋದ ಸೇನಾ ಉಪಕರಣಗಳನ್ನೂ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಾಲಿಬಾನ್ ವಕ್ತಾರನೊಬ್ಬ ಹೇಳಿದ್ದಾನೆ.
ನಾಗರಿಕರ ಸಾವು ನೋವುಗಳನ್ನು ನಿವಾರಿಸುವುದಕ್ಕಾಗಿ ಭದ್ರತಾ ಪಡೆಗಳು ಜಿಲ್ಲಾ ಕೇಂದ್ರದಿಂದ ಸುಮಾರು ಮೂರು ಕಿಲೋಮೀಟರ್‌ನಷ್ಟು ಹಿಂದಕ್ಕೆ ಸರಿದಿವೆ ಎಂದು ಪ್ರಾಂತೀಯ ಗವರ್ನರ್‌ರ ವಕ್ತಾರ ಉಮರ್ ಝವಾಕ್ ಹೇಳಿದರು.
ಈಗ ಸರಕಾರಿ ಪಡೆಗಳು ಅಫ್ಘಾನಿಸ್ತಾನದಲ್ಲಿ 60 ಶೇಕಡಕ್ಕಿಂತಲೂ ಕಡಿಮೆ ಭಾಗದ ಭೂಮಿಯ ಮೇಲೆ ನಿಯಂತ್ರಣ ಹೊಂದಿವೆ ಎಂದು ಮೂಲಗಳು ಹೇಳಿವೆ.