×
Ad

ಉಡುಪಿ: ಎಸ್ಸೆಸೆಲ್ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 15,583 ವಿದ್ಯಾರ್ಥಿಗಳು

Update: 2017-03-23 20:30 IST

ಉಡುಪಿ, ಮಾ.23: ಮಾ.30ರಿಂದ ಪ್ರಾರಂಭಗೊಳ್ಳುವ ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಿಂದ ಒಟ್ಟು 15,583 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

 ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ನಡೆಸುವ ಕುರಿತ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಪರೀಕಷಾ ಪ್ರಶ್ನೆಪತ್ರಿಕೆ ವಿತರಣೆಗೆ 14 ಮಾರ್ಗಗಳನ್ನು ಗುರುತಿಸಲಾಗಿದ್ದು, ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.

 ಜಿಲ್ಲೆಯಲ್ಲಿ ಯಾವುದೇ ಅತಿ ಸೂಕ್ಷ್ಮ ಮತ್ತು ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ. ಈ ಬಾರಿಯ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಗದಿತ ಅವಧಿ ಮುಗಿಯುವವರೆಗೂ ಯಾವುದೇ ವಿದ್ಯಾರ್ಥಿ ಪ್ರಶ್ನೆಪತ್ರಿಕೆಯನ್ನು ಹೊರಗೆ ಕೊಂಡೊಯ್ಯುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಲ್ಲಾ ಪರೀಕ್ಷೆಗಳು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಬೆಳಗ್ಗೆ 9:15ರ ಒಳಗೆ ಪರೀಕ್ಷಾ ಕೇಂದ್ರದಲ್ಲಿರಬೇಕು. 9:30ರ ನಂತರ ಪರೀಕ್ಷಾ ಕೇಂದ್ರದ ಒಳಗೆ ಯಾರಿಗೂ ಪ್ರವೇಶ ಇರುವುದಿಲ್ಲ. ದೂರದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ನಿಗದಿತ ಅವಧಿಯೊಳಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಹಾಯವಾಗುವಂತೆ ಅಗತ್ಯವಿರುವೆಡೆ ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟಕ್ಕೆ ವ್ಯವಸ್ಥೆ ಮಾಡುವಂತೆ ಆರ್‌ಟಿಓ ಅಧಿಕಾರಿಗಳಿಗೆ ಸೂಚಿಸಿದ ಪ್ರಿಯಾಂಕಾ, ಅಂತಹ ಗ್ರಾಮೀಣ ಪ್ರದೇಶಗಳ ವಿವರಗಳನ್ನು ನೀಡುವಂತೆ ಡಿಡಿಪಿಐಗೆ ಸೂಚಿಸಿದರು.

ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿಯನ್ನು ಅಳವಡಿಸಲಾಗಿದ್ದು, ಕೇಂದ್ರಗಳ ಸುತ್ತಲಿನ 200 ಮೀ.ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಹಾಗೂ ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಪರೀಕ್ಷೆಗಳಲ್ಲಿ ನಕಲು ಮಾಡುವುದು ಮತ್ತು ನಕಲು ಮಾಡಲು ಸಹಕರಿಸುವುದು ಸಹ ಅಪರಾಧವಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ಹಾಗೂ ಸ್ಕ್ವಾಡ್‌ಗಳನ್ನು ನೇಮಿಸಲಾಗುವುದು. ಪರೀಕ್ಷೆಗಳು ಆರಂಭವಾಗುವ ಒಂದು ಗಂಟೆ ಮುಂಚೆ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ತೆಗೆಯಲಾಗುವುದು ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದರು.

ಸಭೆಯಲ್ಲಿ ಡಯಟ್‌ನ ಪ್ರಾಂಶುಪಾಲ ಶೇಖರ್, ಖಜಾನೆ ಇಲಾಖೆಯ ಉಪ ನಿರ್ದೇಶಕ ಮಾಧವ ಹೆಗೆಡೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News