ಮೇರಠ್: ಪಾರ್ಕ್‌ನಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ
ಮೇರಠ್,ಮಾ.23: ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಆ ರಾಜ್ಯದಲ್ಲಿ ಕೋಮು ಅಸಹಿಷ್ಣುತೆಯು ಉಲ್ಬಣಗೊಂಡಿರುವುದಕ್ಕೆ ನಿದರ್ಶನವೆಂಬಂತಹ ಇನ್ನೊಂದು ಘಟನೆ ಮೇರಠ್ ನಗರದಲ್ಲಿ ವರದಿಯಾಗಿದೆ. ನಗರ ಮಹಿಳಾ ಪಾರ್ಕ್‌ಗೆ ಆಗಮಿಸಿದ್ದ ಮುಸ್ಲಿಂ ಮಹಿಳೆಯರ ಗುಂಪಿನ ಮೇಲೆ ಕಿಡಿಗೇಡಿಯೊಬ್ಬ ಮುಖ್ಯಮಂತ್ರಿ ಆದಿತ್ಯನಾಥ್‌ರ ಹೆಸರು ಹೇಳಿಕೊಂಡು ಬೆೆದರಿಕೆ ಹಾಕಿದ್ದಾನೆ. ಅಲ್ಲಿಯೇ ಇದ್ದ ದಢೂತಿ ಮಹಿಳೆಯೊಬ್ಬಳು, ಮುಸ್ಲಿಂ ಮಹಿಳೆಯರು, ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾಳೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬ ಮೂಕಪ್ರೇಕ್ಷಕನಂತೆ ಇವೆಲ್ಲವನ್ನು ನೋಡುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ಆಪಾದಿಸಿದ್ದಾರೆ. ಬುಧವಾರ ಸಂಜೆ ನಡೆದ ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮೇರಠ್‌ನ ಪಾರ್ಕ್‌ನಲ್ಲಿ ಕುಟುಂಬಿಕರೊಂದಿಗೆ ಬಂದಿದ್ದ ಮುಸ್ಲಿಂ ಮಹಿಳೆಯು ತನ್ನ ಮಗುವನ್ನು ಉಯ್ಯಿಲೆಯಲ್ಲಿ ಆಟವಾಡಿಸುತ್ತಿದ್ದಾಗ, ಅಲ್ಲಿದ್ದ ಇನ್ನೊಂದು ಗುಂಪು ಆಕೆಯನ್ನು ಅಲ್ಲಿಂದ ಹೊರಹೋಗುವಂತೆ ಬೆದರಿಸಿತು ಹಾಗೂ ಆಕೆಯ ಧಾರ್ಮಿಕ ಹಿನ್ನೆಲೆಯನ್ನು ಅಣಕಿಸಿತ್ತು. ಅಲ್ಲದೆ ಅವರ ಜೊತೆಗಿದ್ದ ಮಹಿಳೆಯೊಬ್ಬಳು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಮುಸ್ಲಿಂ ಮಹಿಳೆಯೊಬ್ಬರು ದೂರಿದ್ದಾಳೆ.
ಆದಾಗ್ಯೂ ಹಲ್ಲೆ ನಡೆಸಿದ ಮಹಿಳೆಯು ಮುಸ್ಲಿಂ ಕುಟುಂಬವೇ ಮೊದಲು ತನ್ನನ್ನು ಥಳಿಸಿರುವುದಾಗಿ ಆರೋಪಿಸಿದ್ದಾಳೆ.