ಕೋಟ: ಸರಕಳ್ಳರು ಪೊಲೀಸ್ ಕಸ್ಟಡಿಗೆ
ಕೋಟ, ಮಾ.23: ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಗಳಾದ ನಾವುಂದ ನಿವಾಸಿ ಮಧುಕರ ಖಾರ್ವಿ(26) ಹಾಗೂ ನಾಗೇಶ್ ಖಾರ್ವಿ(23) ಎಂಬವರನ್ನು ಕೋಟ ಪೊಲೀಸರು ಎಂಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮಾ.20ರಂದು ಕಾರ್ಕಡ ಬಳಿ ನಂಬರ್ ಪ್ಲೆಟ್ ಇಲ್ಲದ ಬೈಕಿನಲ್ಲಿ ಬಂದ ಆರೋಪಿಗಳಿಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಕಳವು ಮಾಡಲು ಯತ್ನಿಸಿ ಬ್ರಹ್ಮಾವರ ಕಡೆ ಪರಾರಿಯಾದರು. ಆಗ ಮಹಿಳೆ ಬೊಬ್ಬೆ ಹಾಕಿದ್ದು, ಇದನ್ನು ಗಮನಿಸಿದ ಗಸ್ತಿನಲ್ಲಿದ್ದ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ನಾಯಕ್ ಆರೋಪಿಗಳ ಬೈಕನ್ನು ಬೆನ್ನಟ್ಟಿದರು.
ಸಾರ್ವಜನಿಕರ ಸಹಾಯದಿಂದ ಪ್ರದೀಪ್ ನಾಯಕ್ ಆರೋಪಿಗಳಿಬ್ಬರನ್ನು ಬಾರಕೂರು ಕಾಳಿಕಾಂಬ ದೇವಸ್ಥಾನದ ಬಳಿ ವಶಕ್ಕೆ ಪಡೆದುಕೊಂಡರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಇವರು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಕಡೆ ಸರಗಳ್ಳತನ ಮಾಡಿ, ಒಂದು ಸರವನ್ನು ನಾವುಂದ ಸೊಸೈಟಿಯಲ್ಲಿ ಅಡವು ಇಟ್ಟಿದ್ದು, ಉಳಿದ ಸರವನ್ನು ಮಂಗಳೂರು ಹಾಗೂ ಬೆಂಗಳೂರಿನ ಆತಿಕಾ ಗೋಲ್ಡ್ ಜ್ಯುವೆಲ್ಲರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಒಂದು ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.