ಅಂಬೇಡ್ಕರ್ ವಿಚಾರವನ್ನು ಅಪಹರಿಸಿರುವ ಮಾಕ್ಸ್‌ವಾದಿಗಳು ಸಮಾಜದ ದಾರಿ ತಪ್ಪಿಸುತ್ತಿದ್ದಾರೆ: ಡಾ.ರೋಹಿಣಾಕ್ಷ
ಪುತ್ತೂರು, ಮಾ.23: ಅಂಬೇಡ್ಕರ್ ಯಾವುದೇ ಒಂದು ಜಾತಿ ಸಮುದಾಯದ ಸೊತ್ತಲ್ಲ. ಅವರು ಮನುಕುಲದ ಆಸ್ತಿ. ಅವರನ್ನು ಜಾತಿ ಸಮುದಾಯಗಳಿಗೆ ಸೀಮಿತ ಮಾಡುವುದು ಅವರಿಗೆ ಅಪಚಾರ ಮಾಡಿದಂತೆ. ಅವರೊಬ್ಬ ಪ್ರಖರ ರಾಷ್ಟ್ರೀಯವಾದಿ. ಆದರೆ ಅಂಬೇಡ್ಕರ್ ವಿಚಾರಗಳನ್ನು ಮಾರ್ಕ್ಸ್‌ವಾದಿಗಳು ಅಪಹರಿಸಿ ಸಮಾಜದ ದಾರಿ ತಪ್ಪಿಸುತ್ತಾ ಚಳವಳಿಗಳನ್ನು ದಾರಿ ತಪ್ಪಸುತ್ತಿದ್ದಾರೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಹೇಳಿದರು.
ಅವರು ಬುಧವಾರ ರಾಜ್ಯ ಸಮಾಜ ಕಲ್ಯಾಣ ಇಲಾಖೆ ವಿವೇಕಾನಂದ ಕಾಲೇಜಿನಲ್ಲಿ ಅನ್ಯಾನ್ಯ ಸಂಘಗಳ ಆಯೋಜಿಸಿದ್ದ ಅಂಭೇಡ್ಕರ್ ಜ್ಞಾನ ದರ್ಶನ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು.
ದಲಿತ ಸಮುದಾಯವನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸವನ್ನು ಮಾಡಿದ ಅಂಬೇಡ್ಕರ್ ತನ್ನ ಕೊನೆಯ ದಿನಗಳಲ್ಲಿ ತನ್ನ ಸಮುದಾಯದ ಆಕ್ರೋಷ, ಅಸಹನೆಗಳು ಕಮ್ಯುನಿಷ್ಟರ ಕೋವಿಗಳಿಗೆ ಸಿಡಿಗುಂಡುಗಳಾಗಬಾರದು ಎನ್ನುತ್ತಾ ಕಮ್ಯುನಿಷ್ಟರು ಮತ್ತು ದಲಿತರ ನಡುವೆ ತಾನು ಅಡ್ಡಗೋಡೆ ಎಂದು ಹೇಳುತ್ತಿದ್ದರು. ಧರ್ಮ ಬಡವರ ಅವಶ್ಯಕತೆಯಾಗಿದ್ದು ಅದು ಶೋಷಣಾ ರಹಿತವಾಗಬೇಕು ಎನ್ನುತ್ತಾ ಬೌದ್ಧ ಧರ್ಮಕ್ಕೆ ಮತಾಂತರವಾದರೇ ಹೊರತು ಧರ್ಮವನ್ನು ಕಮ್ಯುನಿಷ್ಟರ ಹಾಗೆ ಅಫೀಮು ಎನ್ನಲಿಲ್ಲ. ಸಶಕ್ತ ಭಾರತವನ್ನು ಕಟ್ಟುವಲ್ಲಿ ಅಂಬೇಡ್ಕರ್ ವಿಚಾರ ದಾರಿ ದೀಪ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಗೋವಿಂದರಾಜು ಮಾತನಾಡಿ ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ಮೂಲಕ ಸಮಾಜದಲ್ಲಿ ಸಮಾನತೆಯನ್ನು ತರುವ ಪ್ರಯತ್ನ ಮಾಡಿದರು. ಈ ಕಾನೂನಿನಿಂದ ದೇಶದ ಮಹಿಳೆಯರು ಅತೀ ಹೆಚ್ಚು ಪ್ರಯೋಜನ ಪಡೆಯುವಂತಾಯಿತು. ಆಸ್ತಿಯ ಹಕ್ಕಿನಲ್ಲಿ ಸಮಾನ ಪಾಲು ಪಡೆಯಲು ಸಾಧ್ಯ ವಾಯಿತು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಘು ಧರ್ಮಸೇನ ಮಾತನಾಡಿ ಅಂಬೇಡ್ಕರ್ ಜಾತಿ ವಿನಾಶವನ್ನು ಬಯಸಿದರು. ಅದಕ್ಕಾಗಿ ಶಿಕ್ಷಣವನ್ನು ಅವರು ಮಾಧ್ಯಮವಾಗಿಸಿಕೊಂಡರು. ಶಿಕ್ಷಣದಿಂದ ಉನ್ನತ ಅಧಿಕಾರವನ್ನು ಪಡೆಯಲು ಸಾದ್ಯ . ಇದರಿಂದ ಜಾತಿಯ ಅಸಮಾನತೆಯನ್ನು ಕಳೆದುಕೊಳ್ಳಲು ಸಾಧ್ಯ ಎಂದರು. ಆದರೆ ಇಂದು ಸಮಾಜ ಅಸ್ಪಶ್ಯತೆಯನ್ನು ನಿವಾರಿಸುವ ಬದಲು ಅದರ ಲಕ್ಷಣಗಳಿಗೆ ಔಷಧಿ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಂವಿದಾನ ಶಿಲ್ಪಿಯಾದ ಅಂಬೇಡ್ಕರ್ ಸತತ ಪರಿಶ್ರಮದಿಂದ ಆ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಯಿತು. ಬಾಲ್ಯದಿಂದ ತೊಡಗಿ ಜೀವನವೆಲ್ಲಾ ಅಪಮಾನಗಳನ್ನು ಎದುರಿಸಿದರೂ ಅವರು ದೇಶವಾಸಿಗಳನ್ನು ಶಿಕ್ಷಣ, ಸಹೋದರತೆ , ಸ್ವಾವಲಂಬನೆಯಿಂದ ಮಾತ್ರ ಮೇಲೆತ್ತಲು ಸಾಧ್ಯ ಎಂದು ಹೇಳಿದರು. ಅವರ ಜ್ಞಾನರಾಶಿಯನ್ನು ಪರಿಗಣಿಸಿಯೇ ವಿಶ್ವ ಸಂಸ್ಥೆ ಅವರ ಜನ್ಮ ದಿನವನ್ನು ಜಾಗತಿಕ ಜ್ಞಾನ ದಿನವಾಗಿ ಆಚರಿಸುತ್ತಿರುವುದು ಎಂದರು.
ವೇದಿಕೆಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಅನಿತಾ ಕಾಮತ್ ಹಾಗೂ ಕವಿತಾ ಉಪಸ್ಥಿತರಿದ್ದರು. ಅಂಬೇಡ್ಕರ್ ಜ್ಞಾನ ದರ್ಶನ ಸಮಾರಂಭದ ಜಿಲ್ಲಾ ಸಂಯೋಜಕಿಯಾದ ಪದ್ಮಾವತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ವಿದ್ಯಾ ಎಸ್ ವಂದಿಸಿದರು. ವಿದ್ಯಾರ್ಥಿ ವರುಣ್ ಕೆ.ಪಿ ನಿರ್ವಹಿಸಿದರು.