ಕರ್ಣಾಟಕ ಬ್ಯಾಂಕ್‌ನ 756ನೆ ಶಾಖೆಯ ಉದ್ಘಾಟನೆ
ಬೆಳ್ತಂಗಡಿ, ಮಾ.23: ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರಿಗೂ ನಗರದ ವಾಸಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಕರ್ಣಾಟಕ ಬ್ಯಾಂಕ್ ಮಾಡುತ್ತಿದೆ ಎಂದು ಬ್ಯಾಂಕ್‌ನ ಮಹಾಪ್ರಬಂಧಕ ರಘುರಾಮ್ ಹೇಳಿದರು. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಕರ್ಣಾಟಕ ಬ್ಯಾಂಕ್‌ನ 756ನೆಯ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸೇವೆಸಲ್ಲಿಸಲು ಹೆಚ್ಚು ಹೆಚ್ಚು ಶಾಖೆಗಳನ್ನು ಗ್ರಾಮಗಳಲ್ಲಿ ಆರಂಭಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 94 ಸಾವಿರ ಕೋಟಿಯ ವ್ಯವಹಾರಗಳನ್ನು ಮಾಡಿದ್ದು 451 ಕೋಟಿ ಲಾಭಗಳಿಸಿದೆ ಎಂದರು. ಎಲ್ಲರಿಗೂ ಉತ್ತಮವಾದ ಬ್ಯಾಂಕಿಂಗ್ ವ್ಯವಹಾರ ಲಭ್ಯವಾಗಬೇಕು ಎಂಬುದೇ ನಮ್ಮ ಗುರಿಯಾಗಿದೆ, ಜನರು ಹೆಚ್ಚು ವ್ಯವಹಾರಗಳನ್ನು ಬ್ಯಾಂಕ್ ಮೂಲಕವಾಗಿ ನಡೆಸುವಂತೆ ಅವರು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ಜಿಪಂ ಸದಸ್ಯ ಕೊರಗಪ್ಪನ್ಯಾಕ, ಕಳೆಂಜ ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಮಾಜಿ ತಾಪಂ ಅಧ್ಯಕ್ಷ ವಿಜಯ ಕುಮಾರ್ ಜೈನ್, ಸ್ಥಳೀಯರಾದ ಅಬ್ರಹಾಂ, ಸೆಬಾಸ್ಟಿಯನ್ ಹಾಗೂ ಬ್ಯಾಂಕ್‌ನ ಅಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ಬ್ಯಾಂಕ್‌ನ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕ ನಾಗರಾಜ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಾಕಾ ಪ್ರಬಂಧಕ ಪ್ರವೀಣ್ ಕುಮಾರ್ ಎಂ. ವಂದಿಸಿದರು.