ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಪ್ರಪ್ರಥಮ ‘ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು ಪ್ರಕಟನೆಗೆ ಸಿದ್ಧ

Update: 2017-03-23 18:24 GMT
  • ಪ್ರದೇಶಾರು ಭಿನ್ನತೆಯ ಪದಗಳಿಗೂ ಆದ್ಯತೆ
  • 18 ಸಾವಿರ ಪದಗಳ ಸಂಗ್ರಹ

ಮಂಗಳೂರು, ಮಾ.23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಎರಡೂವರೆ ವರ್ಷಗಳ ಹಿಂದೆ ಚಾಲನೆ ನೀಡಿದ್ದ ಪ್ರಪ್ರಥಮ ‘ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು ಇದೀಗ ಪ್ರಕಟನೆಗೆ ಸಿದ್ಧಗೊಂಡಿವೆ.

ರಾಜ್ಯ ಸರಕಾರ ಬ್ಯಾರಿ ಅಕಾಡಮಿಯನ್ನು ಘೋಷಿಸಿ 10 ವರ್ಷಗಳಾಗುತ್ತಿವೆ. ಕೆಲಸ ಕಾರ್ಯಗಳನ್ನು ಆರಂಭಿಸಿ 8 ವರ್ಷಗಳು ಕಳೆದಿವೆ. ಈಗಾಗಲೇ ನೂರಾರು ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಮುದ್ರಣ ಇತ್ಯಾದಿಯನ್ನು ಮಾಡಿದರೂ ನಿಘಂಟು ರಚನೆಯಾಗಿರಲಿಲ್ಲ. ಇದೀಗ ಸತತ 30 ತಿಂಗಳ ಪರಿಶ್ರಮದ ಲವಾಗಿ ಸುಮಾರು 18 ಸಾವಿರ ಪದಗಳನ್ನು ಒಳಗೊಂಡ ನಿಘಂಟು ಪ್ರಕಟನೆಗೆ ಸಿದ್ಧಗೊಂಡಿವೆ.

ಬ್ಯಾರಿ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ ಹೆಚ್ಚಾಗುತ್ತಿದ್ದು, ಅದರಲ್ಲೂ ಬ್ಯಾರಿ ಮಕ್ಕಳು ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಆದ್ಯತೆ ನೀಡುವ ಕಾರಣ ಬ್ಯಾರಿ ಭಾಷೆ ಅವನತಿಯತ್ತ ಸಾಗಲಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಆ ಹಿನ್ನೆಲೆಯಲ್ಲಿ ಬ್ಯಾರಿ ಭಾಷೆಯ ಪದಗಳನ್ನು ಸಂಗ್ರಹಿಸಿ ಯುವಪೀಳಿಗೆಗೆ ಲೋಕಾರ್ಪಣೆ ಮಾಡುವ ಮಹತ್ವಾಕಾಂಕ್ಷೆಯ ಈ ಯೋಜನೆ ಇದೀಗ ಅಂತಿಮ ಘಟ್ಟದಲ್ಲಿವೆ.

1997ರಲ್ಲಿ ಬೆಂಗಳೂರಿನ ಬ್ಯಾರೀಸ್ ವೆಲೆಓಂೀರ್ ಅಸೋಸಿಯೇಶನ್‌ನ ಪದಾಕಾರಿಗಳ ಕೋರಿಕೆಯ ಮೇರೆಗೆ ಸಂಶೋಧಕ ಡಾ.ವಹಾಬ್ ದೊಡ್ಡಮನೆ ಸುಮಾರು 2 ಸಾವಿರ ಶಬ್ದಗಳ ‘ಇಂಗ್ಲಿಷ್ -ಬ್ಯಾರಿ’ ನಿಘಂಟು ರಚಿಸಿದ್ದರು. ಇದೀಗ ಅಕಾಡಮಿಯು ಸಂಶೋಧಕ ಪ್ರೊ.ಬಿ.ಎಂ.ಇಚ್ಲಂಗೋಡು ಸಂಪಾದಕತ್ವದಲ್ಲಿ ‘ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು ರಚಿಸಲಾಗಿದೆ. ಈ ಮಧ್ಯೆ ಮಂಜೇಶ್ವರ ಭಾಗದ ಬ್ಯಾರಿ ಭಾಷೆಯ ಪದಗಳನ್ನು ಸಂಗ್ರಹಿಸಿ ಮಲೆಯಾಳಿ ಲಿಪಿಯಲ್ಲಿ ‘ಬ್ಯಾರಿ- ಮಲೆಯಾಳಿ’ ನಿಘಂಟು ರಚಿಸಲಾಗಿತ್ತು. ಎರಡೂವರೆ ವರ್ಷದ ಹಿಂದೆ ನಿಘಂಟು ರಚನೆ ಕಾರ್ಯ ಆರಂಭಿಸಿದೊಡನೆ ಸುಮಾರು 50 ಸಾವಿರ ಶಬ್ದಗಳ ಕ್ರೋಡೀಕರಣ ಮಾಡಲಾಯಿತು. ಬಳಿಕ ನಿಘಂಟು ಸಮಿತಿಯು ಪರಿಶೀಲಿಸುತ್ತಲೇ ಪುನರಾವರ್ತನೆಗೊಂಡ ಶಬ್ದಗಳನ್ನು ಕೈ ಬಿಟ್ಟಿತು. ಅದರಂತೆ ಇದೀಗ ಸುಮಾರು 18 ಸಾವಿರ ಶಬ್ದಗಳ ಭಂಡಾರವಿದೆ. ಬ್ಯಾರಿ-ಕನ್ನಡ-ಇಂಗ್ಲಿಷ್ ಭಾಷೆಗಳನ್ನು ಬಳಸಿಕೊಂಡು ಕನ್ನಡ ಲಿಪಿ ಬಳಸಿ ಇದೇ ಮೊದಲ ಬಾರಿಗೆ ನಿಘಂಟು ರಚಿಸಲಾಗಿದೆ.

ಮಂಗಳೂರು, ಉಳ್ಳಾಲ, ಮಂಜೇಶ್ವರ, ಕಾಸರಗೋಡು, ವಿಟ್ಲ, ಪುತ್ತೂರು, ಕೊಣಾಜೆ, ತಲಪಾಡಿ, ಸುಳ್ಯ, ಕುಂದಾಪುರ, ಬೆಳ್ತಂಗಡಿ, ಬಂಟ್ವಾಳ, ಮುಲ್ಕಿ ಹೀಗೆ ಬ್ಯಾರಿ ಭಾಷೆಯಲ್ಲಿ ಪ್ರಾದೇಶಿಕ ಭಿನ್ನತೆಯಿದೆ. ನೂರಾರು ವರ್ಷದ ಹಿಂದೆ ಅವಿಭಜಿತ ದ.ಕ. ಜಿಲ್ಲೆಯಿಂದ ಕೆಲಸ ಕಾರ್ಯಗಳಿಗಾಗಿ ಮಲೆನಾಡು ಪ್ರದೇಶಗಳಿಗೆ ವಲಸೆ ಹೋದ ಬ್ಯಾರಿಗಳು ಅಲ್ಲಿನ ಪ್ರಾದೇಶಿಕತೆಗೆ ತಕ್ಕಂತೆ ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ.

ಈ ಎಲ್ಲ ಪ್ರದೇಶಗಳ ಬ್ಯಾರಿಗಳಾಡುವ ಭಾಷೆಯ ಭಿನ್ನ ಪದಗಳನ್ನು ಈ ನಿಘಂಟಿನಲ್ಲಿ ಅಳವಡಿಸಿರುವುದು ಹೆಗ್ಗಳಿಕೆಯಾಗಿದೆ.

ನಾನು ಹಲವಾರು ವರ್ಷಗಳಿಂದ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬಗ್ಗೆ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೆ. ಬ್ಯಾರಿ ಭಾಷೆಯಲ್ಲೂ ನಿಘಂಟು ರಚನೆಯಾಗಬೇಕು ಎಂಬ ಹಂಬಲ ನನಗೆ ಮೊದಲೇ ಇತ್ತು. ಪ್ರಸಕ್ತ ಅಕಾಡಮಿ ನನಗೆ ನೀಡಿದ ಈ ಜವಾಬ್ದಾರಿ ನನಗೆ ಸವಾಲಿನ ಹೊಣೆಯಾಗಿತ್ತು. ನಾನು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎಂಬ ತೃಪ್ತಿ ಇದೆ. ನನ್ನ ಜೊತೆಗೂಡಿದ ಇಬ್ಬರು ಉಪಸಂಪಾದಕರ ಶ್ರಮವೂ ಅಪಾರ.

ಪ್ರೊ.ಬಿ.ಎಂ.ಇಚ್ಲಂಗೋಡು.

ಸಂಪಾದಕರು. ‘ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು.

ಬ್ಯಾರಿ ಭಾಷೆ ಕಣ್ಮರೆಯಾಗಬಹುದು ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ತಾನು ಅಧ್ಯಕ್ಷನಾಗಿ ಅಕಾರ ಸ್ವೀಕರಿಸಿದ ಬೆನ್ನಿಗೆ ನಿಘಂಟು ರಚನೆಯ ಗುರಿ ಹಾಕಿಕೊಂಡೆ. ಬ್ಯಾರಿ ಪದಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅರ್ಥ ನೀಡಲಾಗಿದೆ. ಹಾಗಾಗಿ ಈ ನಿಘಂಟು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಲಿದೆ. ನಿಘಂಟು ರಚನೆಯಲ್ಲಿ ಸಲಹಾ ಸಮಿತಿ ಮತ್ತು ಸಂಪಾದಕ ಮಂಡಳಿಯಲ್ಲದೆ, ವಿದ್ವಾಂಸರಾದ ಪ್ರೊ.ಕೆ.ಪಿ.ರಾವ್, ಡಾ. ಯು.ಪಿ.ಉಪಾಧ್ಯಾಯ, ಪ್ರೊ.ಸುರೇಂದ್ರ ರಾವ್ ಹಾಗೂ ಅಕಾಡಮಿ ಸದಸ್ಯರು ಮತ್ತಿತರರ ಸಹಕಾರ ಅಪಾರ.

ಬಿ.ಎ.ಮುಹಮ್ಮದ್ ಹನ್ೀ

ಅಧ್ಯಕ್ಷರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ.

ಕ್ರೌನ್ 1/4 ಆಕಾರದ ಈ ನಿಘಂಟು ಸುಮಾರು 700 ಪುಟಗಳನ್ನು ಹೊಂದಿದ್ದು, 90 ಜಿಎಸ್‌ಎಂ ಮ್ಯಾಪ್ಲಿಥೋ ಕಾಗದವನ್ನು ಬಳಸ ಲಾಗುತ್ತದೆ. ಸಾರ್ವಕಾಲಿಕ ದಾಖಲೆಯಾಗಿ ಉಳಿಯಬಲ್ಲ ಈ ನಿಘಂಟಿಗೆ ಆಕರ್ಷಕ ಛಾಯೆ ನೀಡಲು ನಿರ್ಧರಿ ಸಲಾಗಿದೆ. ಈಗಾಗಲೇ ನಿಘಂಟು ಮುದ್ರಣಕ್ಕೆ ಟೆಂಡರ್ ಆಹ್ವಾನಿಸಲಾಗಿದ್ದು, ಶೀಘ್ರ ಅರ್ಜಿದಾರರ ಸಮ್ಮುಖ ಟೆಂಡರ್ ಬಾಕ್ಸ್ ತೆರೆಯಲಾಗುತ್ತದೆ. ಬಳಿಕ ಮುದ್ರಣ ಪ್ರಕ್ರಿಯೆಗೆ ಅನುಮತಿ ನೀಡಲಾಗುವುದು.

ಉಮರಬ್ಬ,

ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ.

  • ಅಕಾಡಮಿಯ ಪ್ರಮುಖ ಮೈಲುಗಲ್ಲುಗಳು

1987ರಲ್ಲಿ ಬೆಂಗಳೂರಿನಲ್ಲಿ ದಿ ಬ್ಯಾರೀಸ್ ವೆಲೆಓಂೀರ್ ಅಸೋಸಿಯೇಶನ್ ಸ್ಥಾಪನೆಯಾಗುವುದರೊಂದಿಗೆ ಬ್ಯಾರಿ ಚಳವಳಿಗೆ ನಾಂದಿ ಹಾಡಲಾಯಿತು. ಅಂದರೆ ಈ ಬ್ಯಾರಿ ಚಳವಳಿಗೆ ಸುಮಾರು 30 ವರ್ಷಗಳ ಇತಿಹಾಸವಿದೆ.

1997ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ಬ್ಯಾರಿ ಸಮ್ಮೇಳನ ನಡೆಯಿತು. ಅದರಿಂದ ಪ್ರೇರಣೆಗೊಂಡ ಮಂಗಳೂರಿನ ಬ್ಯಾರಿಗಳು ಮಂಗಳೂರಿನಲ್ಲೂ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಸಿದರು. ಆ ವೇಳೆಗೆ ಬ್ಯಾರಿ ಸಾಹಿತ್ಯ ಅಕಾಡಮಿಯ ಕೂಗು ಕೇಳಿ ಬಂತು. ಬಳಿಕ ಬಂಟ್ವಾಳ, ಉಡುಪಿಗಳಲ್ಲಿ ನಡೆದ ಬ್ಯಾರಿ ಸಾಹಿತ್ಯ ಸಮ್ಮೇಳನಗಳಲ್ಲೂ ಈ ಆಗ್ರಹ ಬಲವಾಯಿತು. 2007ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ 4ನೆ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಬ್ಯಾರಿ ಸಾಹಿತ್ಯ ಅಕಾಡಮಿಯ ಘೋಷಣೆಯಾಯಿತು. 2009ರಲ್ಲಿ ಎಂ.ಬಿ.ಅಬ್ದುರ್ರಹ್ಮಾನ್ ಅಧ್ಯಕ್ಷತೆಯ ಪ್ರಥಮ ತಂಡ ಮತ್ತು 2012ರಲ್ಲಿ ರಹೀಂ ಉಚ್ಚಿಲ್ ಅಧ್ಯಕ್ಷತೆಯ ದ್ವಿತೀಯ ತಂಡ ಅಕಾಡಮಿಯನ್ನು ಮುನ್ನಡೆಸಿತು. 2014ರಲ್ಲಿ ಬಿ.ಎ.ಮುಹಮ್ಮದ್ ಹನ್ೀ ಅಧ್ಯಕ್ಷತೆಯ 3ನೆ ತಂಡ ಸದ್ಯ ಕಾರ್ಯಾಚರಿಸುತ್ತಿದ್ದು, ಆಗಸ್ಟ್‌ಗೆ ಈ ತಂಡದ ಅವ ಮುಕ್ತಾಯಗೊಳ್ಳಲಿದೆ. ಈಗಾಗಲೇ ಈ ತಂಡಗಳು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿವೆ. ಅಕಾಡಮಿಯ ಸ್ಥಾಪನೆಯ ಬಳಿಕ ಸಾಹಿತ್ಯ ಸಮ್ಮೇಳನಕ್ಕೆ ಕಡಿವಾಣಬಿದ್ದರೂ ಸಾಹಿತ್ಯ ಚಟುವಟಿಕೆ ಕುಂಠಿತಗೊಂಡಿಲ್ಲ. ಅಕಾಡಮಿಯ ಪ್ರಯತ್ನದಿಂದಲೇ ಮಂಗಳೂರಿನಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸರಕಾರ ಘೋಷಿಸಿದೆ.

ಇದೀಗ ದಾಖಲೆಯಾಗಿ ಉಳಿಯಬಲ್ಲ ‘ಬ್ಯಾರಿ-ಕನ್ನಡ-ಇಂಗ್ಲಿಷ್’ ನಿಘಂಟು ಪ್ರಕಟನೆಗೆ ಸಿದ್ಧಗೊಂಡಿವೆ. ಇನ್ನು ‘ಬ್ಯಾರಿ ಭವನ’ ನಿರ್ಮಾಣಕ್ಕೂ ಚಾಲನೆ ಸಿಗಲಿದೆ. ಹೀಗೆ ಕಳೆದ 30 ವರ್ಷಗಳ ಬ್ಯಾರಿ ಚಳವಳಿಗೆ 2007, 2017 ಮೈಲಿಗಲ್ಲಾಗಲಿವೆ.

ಬ್ಯಾ ರಿ ಅಕಾಡಮಿಯ ಪ್ರಸಕ್ತ ತಂಡದ ಅವಯು ಆಗಸ್ಟ್ 13ರವರೆಗೆ ಇದೆ. ಈ ಮಧ್ಯೆ ಕುಡುಪು ಗ್ರಾಮದ ಬೈತುರ್ಲಿಯಲ್ಲಿ ಮೂಡದಿಂದ 25 ಸೆಂಟ್ಸ್ ಖರೀದಿಸಿರುವ ಅಕಾಡಮಿಯು ಅಲ್ಲಿ ‘ಬ್ಯಾರಿ ಭವನ’ ನಿರ್ಮಾಣಕ್ಕೆ ಮುಂದಾಗಿದೆ. ಅದಲ್ಲದೆ ಬ್ಯಾರಿ ಭಾಷೆ ಕಲಿಯುವ ಆಸಕ್ತಿ ಕಂಡು ಬಂದ ಹಿನ್ನೆಲೆಯಲ್ಲಿ ‘ಬ್ಯಾರಿ ವ್ಯಾಕರಣ’ವನ್ನು ಹೊರತರಲು ಪ್ರಯತ್ನ ನಡೆಸಿದೆ. ಜತೆಗೆ ಸುಮಾರು 100 ಮಂದಿ ಬ್ಯಾರಿ ಕವಿ-ಕವಯತ್ರಿಯರು ರಚಿಸಿದ ಕಾವ್ಯ ಸಂಕಲನ ಕೂಡ ಹೊರಬರಲಿದೆ. 6 ಬ್ಯಾರಿ ವಿದ್ಯಾರ್ಥಿಗಳು ೆಲೋಶಿಪ್ ಪಡೆದು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ವಿಷಯಕ್ಕೆ ಸಂಬಂಸಿ ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ರಚಿಸಿದ ಸುಮಾರು 600 ಪುಟಗಳ ಕೃತಿಯೂ ಹೊರಬರಲಿದೆ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News