ರಿಯಾಝ್ ಮೌಲವಿ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2017-03-24 18:24 GMT

ಕಾಸರಗೋಡು, ಮಾ.24: ಹಳೆ ಚೂರಿ ಎಂಬಲ್ಲಿ ಸೋಮವಾರ ರಾತ್ರಿ ನಡೆದ ಮದ್ರಸ ಶಿಕ್ಷಕನ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾಸರಗೋಡು ಕೇಳುಗುಡ್ಡೆಯ ಎಸ್.ನಿತಿನ್ ರಾವ್(18), ಸಣ್ಣಕೂಡ್ಲುವಿನ ಎನ್.ಅಖಿಲೇಶ್(25) ಮತ್ತು ಕೇಳುಗುಡ್ಡೆ ಅಯ್ಯಪ್ಪನಗರದ ಅಜೇಶ್ ಯಾನೆ ಅಪ್ಪು(20) ಬಂಧಿತ ಆರೋಪಿ ಗಳಾಗಿದ್ದಾರೆ. ಬಂಧಿತರಿಂದ ಕೊಲೆಗೆ ಬಳಸಿದ ಮಾರಕಾಯುಧ ಮತ್ತು ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತರನ್ನು ಶುಕ್ರವಾರ ಮಧ್ಯಾಹ್ನ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿ ಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಡಿಕೇರಿಯವರಾಗಿರುವ ರಿಯಾಝ್ ವೌಲವಿ ಯವರನ್ನು ಮಾ.20ರಂದು ರಾತ್ರಿ ಬರ್ಬರವಾಗಿ ಕೊಲೆಗೈಯಲಾಗಿತ್ತು.

ಮದ್ರಸ ಶಿಕ್ಷಕರ ಹತ್ಯೆ ರಾಜ್ಯ-ರಾಷ್ಟ್ರಮಟ್ಟದಲ್ಲೇ ಸಂಚಲನ ಮೂಡಿಸಿತ್ತು. ಈ ಹತ್ಯೆಯ ಹಿಂದೆ ಕಾಸರಗೋಡು ಜಿಲ್ಲೆಯಲ್ಲಿ ಗಲಭೆ ಹರಡುವ ಸಂಚು ಅಡಗಿದೆ ಎಂಬ ವರದಿಯನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಮರುದಿನವೇ ಐಜಿಪಿ ಮೇಲು ಸ್ತುವಾರಿಯಲ್ಲಿ ಕಣ್ಣೂರು ಅಪರಾಧ ಪತ್ತೆದಳದ ಎಸ್ಪಿ ಎ.ಶ್ರೀನಿವಾಸ್ ನೇತೃತ್ವದ ವಿಶೇಷ ತಂಡವನ್ನು ರಚಿಸಿತ್ತು. ತನಿಖಾ ತಂಡವು ಮೂರೇ ದಿನಗಳಲ್ಲೇ ಆರೋಪಿಗಳನ್ನು ಪತ್ತೆಹಚ್ಚುವ ಮೂಲಕ ಸಾರ್ವ ಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ತಾಳಿಪಡ್ಪುವಿನಲ್ಲಿ ನಡೆದಿತ್ತು ಕೊಲೆಗೆ ಸಂಚು ರಿಯಾಝ್‌ರ ಹತ್ಯೆ ಆರೋಪಿಗಳಾದ ನಿತಿನ್ ರಾವ್, ಅಖಿಲೇಶ್ ಮತ್ತು ಅಜೇಶ್ ಕಾಸರಗೋಡು ನಗರ ಹೊರವಲಯದ ತಾಳಿಪಡ್ಪುಮೈದಾನದಲ್ಲಿ ಸಂಚು ರೂಪಿಸಿದ್ದರು. ಮಾ.20ರಂದು ಸಂಜೆ ಈ ಮೂವರು ತಾಳಿಪಡ್ಪು ಮೈದಾನದಲ್ಲಿ ಒಟ್ಟುಗೂಡಿದ್ದರು. ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುವ ಅಖಿಲೇಶ್ ಕೆಲಸ ಮುಗಿಸಿ ಬರುವ ಸಂದರ್ಭ ಗಾಂಜಾ ಮತ್ತು ಮದ್ಯದ ಬಾಟಲಿಗಳನ್ನು ತಂದಿದ್ದನು. ಮಧ್ಯರಾತ್ರಿಯವರೆಗೆ ಅಲ್ಲೇ ಉಳಿದುಕೊಂಡಿದ್ದ ಆರೋಪಿಗಳು ಯಾರನ್ನಾದರೂ ಕೊಲೆಗೈಯುವ ಬಗ್ಗೆ ಸಂಚು ರೂಪಿಸಿದ್ದರೆನ್ನಲಾಗಿದೆ. ಕೊಲೆಯ ಉದ್ದೇಶದಿಂದ ಅಜೇಶ್ ಮಾರಕಾ ಯುಧದೊಂದಿಗೆ ಕೇಳುಗುಡ್ಡೆ ತನಕ ನಡೆದು ಕೊಂಡು ಹೋಗಿದ್ದು, ನಿತಿನ್ ಮತ್ತು ಅಖಿಲೇಶ್ ಆತನ ಹಿಂದೆಯೇ ಬೈಕ್‌ನಲ್ಲಿ ತೆರಳಿದ್ದರು. ಬಳಿಕ ಅಜೇಶ್ ಮಸೀದಿ ಅಂಗಣಕ್ಕೆ ನುಗ್ಗಿದ್ದಾನೆ. ಆದರೆ ಅಲ್ಲಿ ಯಾರೂ ಕಣ್ಣಿಗೆ ಬಿದ್ದಿರಲಿಲ್ಲ್ಲ. ನಿತಿನ್ ಕೂಡಾ ಕಲ್ಲುಗಳನ್ನು ಹಿಡಿದು ಮಸೀದಿ ಆವರಣಕ್ಕೆ ನುಗ್ಗಿ ದ್ದಾನೆ. ಅಷ್ಟರಲ್ಲಿ ಹೊರಗೆ ಶಬ್ದ ಕೇಳಿಸಿದ್ದರಿಂದ ರಿಯಾಝ್ ವೌಲವಿ ತನ್ನ ಕೊಠಡಿಯ ಬಾಗಿಲು ತೆರೆದಿದ್ದಾರೆ. ಈ ವೇಳೆ ಒಮ್ಮೆಲೇ ಒಳನುಗ್ಗಿದ ಅಜೇಶ್ ಮಾರಕಾಯುಧದಿಂದ ರಿಯಾಝ್‌ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೊಬ್ಬೆ ಕೇಳಿ ಇನ್ನೊಂದು ಕೊಠಡಿಯಲ್ಲಿದ್ದ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಎಚ್ಚೆತ್ತು ಬಾಗಿಲು ತೆರೆದಾಗ ಅವರ ಮೇಲೆ ನಿತಿನ್ ಕಲ್ಲು ತೂರಾಟ ನಡೆಸಿದ್ದಾನೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲಿಂದ ನೇರವಾಗಿ ಕೇಳುಗುಡ್ಡೆಯ ಅಂಗನ ವಾಡಿಗೆ ತೆರಳಿದ ಮೂವರು ಆರೋಪಿಗಳು ಅಲ್ಲಿನ ಟ್ಯಾಂಕ್‌ನ ನೀರಿನಲ್ಲಿ ತಮ್ಮ ವಸ್ತ್ರದಲ್ಲಾಗಿದ್ದ ರಕ್ತದ ಕಲೆಗಳನ್ನು ತೊಳೆದು ಅಖಿಲೇಶ್‌ನ ಮನೆಗೆ ತೆರಳಿದ್ದಾರೆ. ಮನೆಯವರು ವಿಚಾರಿ ಸಿದಾಗ ಚುನಾವಣೆಯ ಸಂದರ್ಭದ ಪ್ರಕರಣ ವೊಂದಕ್ಕೆ ಸಂಬಂಧಿಸಿ ನಮ್ಮ ಮೇಲೆ ವಾರೆಂಟ್ ಜಾರಿಯಾಗಿದ್ದು, ಪೊಲೀಸರು ಹುಡುಕಾಡು ತ್ತಿದ್ದಾರೆ. ಅದಕ್ಕಾಗಿ ತಪ್ಪಿಸಿ ಬಂದಿರುವುದಾಗಿ ಹೇಳಿ ದ್ದಾರೆ. ರಾತ್ರಿ ಅಲ್ಲೇ ಮಲಗಿದ ನಿತಿನ್ ಮತ್ತು ಅಜೇಶ್ ಬೆಳಗ್ಗೆ ಅಲ್ಲಿಂದ ತೆರಳಿದ್ದರು.

ಬಯಲಿನ ಶೆಡ್‌ನಲ್ಲೇ ಎರಡು ದಿನ ಕಳೆದ ಹಂತಕರು:

ಕೊಲೆ ನಡೆದ ರಾತ್ರಿ ಅಖಿಲೇಶ್‌ನ ಮನೆಯಲ್ಲಿ ಮಲಗಿದ್ದ ಅಜೇಶ್ ಮತ್ತು ನಿತಿನ್ ಬಳಿಕ ಕೇಳುಗುಡ್ಡೆಯಲ್ಲಿರುವ ಶೆಡ್‌ವೊಂದರಲ್ಲಿ ಅವಿತುಕೊಂಡಿದ್ದರು. ಊಟೋಪಚಾರಕ್ಕೆ ಮಾತ್ರ ರಹಸ್ಯ ವಾಗಿ ಮನೆಗೆ ತೆರಳುತ್ತಿದ್ದರು. ಅಖಿಲೇಶ್ ಮಾತ್ರ ಬ್ಯಾಂಕ್‌ಗೆ ಕೆಲಸಕ್ಕೆ ತೆರಳಿದ್ದನು. ಈತನ್ಮಧ್ಯೆ ಪ್ರತೀದಿನ ಕೂಲಿ ಕೆಲಸಕ್ಕೆ ಹೋಗು ತ್ತಿದ್ದ ಅಜೇಶ್ ಮತ್ತು ನಿತಿನ್ ನಾಪತ್ತೆಯಾ ಗಿರುವುದನ್ನು ಸ್ಥಳೀಯರು ಗಮನಿಸಿದ್ದರು. ಈ ಬಗ್ಗೆ ತನಿಖಾ ತಂಡಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದರು. ಇದು ಆರೋಪಿಗಳ ಪತ್ತೆಗೆ ಪೊಲೀಸ ರಿಗೆ ನೆರವಾಗಿದೆ ಎಂದು ತಿಳಿದುಬಂದಿದೆ.

ಗಲಭೆಗೆ ಸಂಚು?

ರಿಯಾಝ್ ವೌಲವಿಯವರ ಹತ್ಯೆಯ ಹಿಂದೆ ಗಲಭೆ ಸೃಷ್ಟಿಸುವ ಸಂಚು ಅಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಆರೋಪಿಗಳು ಕದ್ದ ಬೈಕೊಂದನ್ನು ಬಳಸಿ ಮಾ.18ರಂದು ತಡರಾತ್ರಿ ಮೀಪು ಗುರಿಯಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದ್ದ ಮೈದಾನಕ್ಕೆ ಬಿಯರ್ ಬಾಟಲಿ ಎಸೆದಿದ್ದರು. ಆ ಮೂಲಕ ಅಲ್ಲಿ ಗುಂಪು ಘರ್ಷಣೆ ನಡೆಯಲು ಕಾರಣವಾಗಿದ್ದರು. ಈ ಸಂದರ್ಭ ಕಲ್ಲೆಸೆತಕ್ಕೆ ಸಿಲುಕಿ ನಿತಿನ್ ರಾವ್‌ನ ಎರಡು ಹಲ್ಲು ಮುರಿದಿತ್ತು. ಇದಕ್ಕೆ ಪ್ರತೀಕಾರವಾಗಿ ಯಾರನ್ನಾದರೂ ಕೊಲೆಗೈದು ಗಲಭೆ ಹರಡಲು ಆರೋಪಿಗಳು ಸಂಚು ಹೂಡಿದ್ದರು. ಅದರಂತೆ ಮಾ.20ರಂದು ರಾತ್ರಿ ಕೇಳುಗುಡ್ಡೆ ಪರಿಸರದಲ್ಲಿ ಹೊಂಚು ಹಾಕಿ ಕುಳಿತಿದ್ದರು. ಈ ವೇಳೆ ಯಾರು ಸಿಗದ ಕಾರಣ ಮಸೀದಿಯ ಆವರಣಕ್ಕೆ ನುಗ್ಗಿ ಅಮಾಯಕ ರಿಯಾಝ್‌ರನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News