×
Ad

2025ರೊಳಗೆ ಕ್ಷಯ ರೋಗ ಮುಕ್ತ ಭಾರತದ ಗುರಿ: ಸಚಿವ ಪ್ರಮೋದ್

Update: 2017-03-24 18:33 IST

ಉಡುಪಿ, ಮಾ.24: ವಿಶ್ವ ಆರೋಗ್ಯ ಸಂಸ್ಥೆಯು 2035ರೊಳಗೆ ವಿಶ್ವವನ್ನು ಕ್ಷಯರೋಗ ಮುಕ್ತ ಮಾಡುವ ಉದ್ದೇಶ ಹೊಂದಿದ್ದರೆ, ಭಾರತವು 2025 ರೊಳಗೆ ಕ್ಷಯರೋಗ ಮುಕ್ತ ರಾಷ್ಟ್ರವೆನಿಸಿಕೊಳ್ಳುವ ಗುರಿ ಹೊಂದಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಅಂಬಲಪಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಉಡುಪಿ ವಿದ್ಯಾರತ್ನ ಸ್ಕೂಲ್ ಆಫ್ ನರ್ಸಿಂಗ್, ನ್ಯೂ ಸಿಟಿ ನರ್ಸಿಂಗ್ ಕಾಲೇಜು, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರ ಮತ್ತು ಮಣಿ ಪಾಲ ಕಾಲೇಜು ಆಫ್ ನರ್ಸಿಂಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿ ಪ್ರಗತಿ ಸೌಧದಲ್ಲಿ ಶುಕ್ರವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.

ಭಾರತದಲ್ಲಿ ಪ್ರತಿದಿನ 6000 ಕ್ಷಯರೋಗ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರತಿ 5 ನಿಮಿಷಕ್ಕೆ ಇಬ್ಬರು ಸಾಯುತ್ತಿದ್ದಾರೆ. ಒಬ್ಬ ಕ್ಷಯ ರೋಗಿಯಿಂದ 10-15 ಜನರಿಗೆ ಈ ಖಾಯಿಲೆ ಹರಡುತ್ತದೆ. ಈ ರೋಗ ಒಬ್ಬರಿಂದ ಒಬ್ಬರಿಗೆ ಶೀಘ್ರವಾಗಿ ಹರಡುವುದರಿಂದ ಅದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬೇಕಾಗಿರುವುದು ಸಮಾಜದ ಜವಾಬ್ದಾರಿ. ಟಿಬಿ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆ ಸದಸ್ಯೆ ವಸಂತಿ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಧರ್ಮಸ್ಥಳ ಗ್ರಾಮಾಭಿವೃದ್ದಿ ತರಬೇತಿ ಕೇಂದ್ರದ ನಿರ್ದೇಶಕ ಪುರುಷೋತ್ತಮ ಪಿ.ಕೆ.ವಿದ್ಯಾರತ್ನ ಸ್ಕೂಲ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಡಾ.ಅನಿತಾ ಸಿ.ರಾವ್, ನ್ಯೂ ಸಿಟಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸ್ಲಾವ್ಯ ನರೋನ್ನ, ಸರಕಾರಿ ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತರ ತರಬೇತಿ ಕೇಂದ್ರದ ಪ್ರಾಂಶುಪಾಲೆ ಪ್ರಫುಲ್ಲ, ಮಣಿಪಾಲ ನರ್ಸಿಂಗ್ ಕಾಲೇಜಿನ ಮಾಲತಿ ನಾಯಕ್, ಶಶಿಧರ್ ಉಪಸ್ಥಿತರಿದ್ದರು.

 ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಕ್ಷಯ ರೋಗದ ಕುರಿತು ಉಪನ್ಯಾಸ ನೀಡಿದರು. ಸುರೇಶ್ ಸ್ವಾಗತಿಸಿದರು. ಮಂಜು ನಾಥ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಣಿಪಾಲ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಕ್ಷಯ ರೋಗದ ಬಗ್ಗೆ ಕಿರು ನಾಟಕ ಪ್ರದರ್ಶನ ನಡೆಯಿತು.

ಜಿಲ್ಲೆಯಲ್ಲಿ ಪ್ರತಿವರ್ಷ 800-900 ಪ್ರಕರಣಗಳು!

ಉಡುಪಿ ಜಿಲ್ಲೆಯಲ್ಲಿ 2016ರಲ್ಲಿ 922 ಹಾಗೂ 2017ರಲ್ಲಿ 162 ಕ್ಷಯ ರೋಗ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ತಲಾ ಒಂದು ಲಕ್ಷ ಜನ ಸಂಖ್ಯೆಯಲ್ಲಿ 73 ಮಂದಿ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ವರ್ಷ 800-900 ಪ್ರಕರಣಗಳು ಪತ್ತೆಯಾಗುತ್ತಿರುತ್ತದೆ. ಈ ಕಾಯಿಲೆ ಯಿಂದ ಗುಣಮುಖವಾಗುವ ಪ್ರಮಾಣ ದೇಶದಲ್ಲಿ ಶೇ.85ರಷ್ಟಿದ್ದರೆ ಜಿಲ್ಲೆಯಲ್ಲಿ ಶೇ.88ರಷ್ಟು ಇದೆ. ಮರಣ ಪ್ರಮಾಣವು ಜಿಲ್ಲೆಯಲ್ಲಿ ಶೇ.5ರಷ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ ತಲಾ ಒಂದು ಲಕ್ಷ ಜನಸಂಖ್ಯೆಯಲ್ಲಿ 217 ಮಂದಿ ಹಾಗೂ ಜಗತ್ತಿನಲ್ಲಿ 140 ಮಂದಿ ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೋಗದಿಂದ ಜಗತ್ತಿನಲ್ಲಿ ಒಂದು ಲಕ್ಷ ಜನಸಂಖ್ಯೆಯಲ್ಲಿ 24 ಮಂದಿ ಹಾಗೂ ಭಾರತದಲ್ಲಿ 99 ಮಂದಿ ಪ್ರತಿ ವರ್ಷ ಸಾಯುತ್ತಿದ್ದಾರೆ. ಪ್ರತಿ ಐದು ನಿಮಿಷಕ್ಕೆ ಐದು ಮಂದಿ ಸಾಯುತ್ತಿದ್ದಾರೆ. 2035ಕ್ಕೆ ಜಗತ್ತಿನಲ್ಲಿ ಕ್ಷಯ ರೋಗದಿಂದ ಸಾಯುವವರ ಸಂಖ್ಯೆಯನ್ನು ಶೇ.95ರಷ್ಟು ಮತ್ತು ಹೊಸ ಕ್ಷಯ ರೋಗ ಪ್ರಕರಣವನ್ನು ಶೇ.90ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News