×
Ad

ಬೆಲೆಯೇರಿಕೆ ವಿರುದ್ಧ ಸಿಪಿಎಂ ವಾಹನ ಪ್ರಚಾರ ಜಾಥಾ

Update: 2017-03-24 19:43 IST

ಮಂಗಳೂರು, ಮಾ. 24: ಆಹಾರ ವಸ್ತುಗಳ ಮೇಲಿನ ಬೆಲೆ ಏರಿತವನ್ನು ವಿರೋಧಿಸಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ವತಿಯಿಂದ ಶುಕ್ರವಾರ ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ವಾಹನ ಪ್ರಚಾರ ಜಾಥಾ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಸೆಕ್ರೆಟೇರಿಯಟ್ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ, ಮೂರು ವರ್ಷಗಳ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಆಳ್ವಿಕೆಯಲ್ಲಿ ನೀಡಿದ ಆಶ್ವಾಸನೆಗಳಿಗೆ ವಿರುದ್ಧವಾಗಿ ಆಹಾರ ಸ್ತುಗಳ ಬೆಲೆಗಳು ಏರುತ್ತಲೇ ಹೋಗಿವೆ. ಮೂರು ವರ್ಷಗಳ ಹಿಂದೆ ಇದ್ದ ಆಹಾರ ವಸ್ತುಗಳ ಬೆಲೆಗಳು ಕಡಲೆ, ಹೆಸರು, ತೊಗರಿ ಬೇಳೆ ಸಂಬಂಧಿಸಿದಂತೆ ಎರಡು ಪಟ್ಟಾಗಿದೆ. ಅಕ್ಕಿಯ ಬೆಲೆಯೂ ವಿಪರೀತ ಏರಿದೆ ಎಂದರು.

ಜಾಗತಿಕ ಮಾರುಕಟ್ಟೆಯಲ್ಲಿ ಲೀಟರಿಗೆ ರೂ. 17ರಂತೆ ಪೆಟ್ರೋಲಿಯಂ ಲಭ್ಯವಾಗುತ್ತಿದ್ದರೂ, ಭಾರತದಲ್ಲಿ ಪೆಟ್ರೋಲ್ ಬೆಲೆ ರೂ. 75ರಷ್ಟಿದೆ. ಗ್ಯಾಸ್ ಬೆಲೆ ರೂ. 415ರಿಂದ ರೂ. 777ಕ್ಕೆ ಏರಿದೆ. ಕಳೆದ ಒಂದೆರಡು ತಿಂಗಳಲ್ಲೇ ರೂ. 75ಕ್ಕೂ ಮೀರಿ ಗ್ಯಾಸ್ ದರ ಏರಿಕೆಯಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ಅಂಬಾನಿ ಮೊದಲಾದ ಉದ್ಯಮಿಗಳು ಕೇಂದ್ರ ಸರಕಾರದ ಮೇಲೆ ಇಟ್ಟಿರುವ ಹಿಡಿತವೇ ಕಾರಣ ಎಂದು ಜೆ. ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರವೂ ಜನತೆಗೆ ಬೆಲೆಯೇರಿಕೆ ವಿರುದ್ಧ ಯಾವ ಪರಿಹಾರವನ್ನು ಒದಗಿಸಿಲ್ಲ. ದೇಶದ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲಾಗಿದೆ. ಬಡ ಪಡಿತರ ಕಾರ್ಡ್‌ದಾರರಿಗೆ ಅಗತ್ಯ ಆಹಾರ ಸಿಗಲಾರದ ಪರಿಸ್ಥಿತಿ ನಿರ್ಮಿಸಿದೆ. ಇದೀಗ ಬೇಸಿಗೆ ಕಾಲವಾಗಿದ್ದು, ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಲಭ್ಯತೆಗಾಗಿ ತುಂಬೆಯಲ್ಲಿ ಅಣೆಕಟ್ಟು ಎತ್ತರ ಹೆಚ್ಚಿಸಿ ನೀರು ಸಂಗ್ರಹಿಸಿದ ಮೇಲೆಯೂ ಯಾಕೆ ನಾಗರಿಕರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದವರು ಪ್ರಶ್ನಿಸಿದರು.

ವಾಹನ ಜಾಥಾ ಪ್ರಚಾರಾಂದೋಲನದ ನೇತೃತ್ವವನ್ನು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ವಹಿಸಿದ್ದರು. ಜಾಥಾ ತಂಡದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ, ಯೋಗೀಶ್ ಜಪ್ಪಿನಮೊಗರು, ಸಿಪಿಎಂ ಮಂಗಳೂರು ನಗರ ಸಮಿತಿ ಸದಸ್ಯರಾದ ಭಾರತಿ ಬೋಳಾರ, ಸಂತೋಷ್ ಕ್ತಿನಗರ, ಸಂತೋಷ್ ಬಜಾಲ್ ಉಪಸ್ಥಿತರಿದ್ದರು. ಜಾಥಾ ಬಳಿಕ ಬಂದರು, ಕುದ್ರೋಳಿ, ಉರ್ವಾಮಾರ್ಕೆಟ್, ಉರ್ವಸ್ಟೋರ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಜ್ಯೋತಿ ವೃತ್ತ, ಕಂಕನಾಡಿ, ಅತ್ತಾವರ, ಜಪ್ಪು ಮಾರ್ಕೆಟ್, ಬೋಳಾರಗಳಲ್ಲಿ ಸಾಗಿ ಮಂಗಳೂರು ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು.

ಜಾಥಾ ಸಮಾರೋಪ

ಜಾಥಾ ಸಮಾರೋಪ ಸಭೆಯನ್ನುದ್ದೇಶಿಸಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಯಾದವ ಶೆಟ್ಟಿ ಮಾತನಾಡಿದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಕೇಂದ್ರ ಸರಕಾರ ಏರಿಸಿದುದರ ಪರಿಣಾಮವಾಗಿ ಸರಕು ಸಾಗಣೆ ದರ ಏರಿಕೆಯಾಗಿದೆ. ಅದರ ಪರಿಣಾಮ ಆಹಾರ ವಸ್ತು ಹಾಗೂ ಸರಕುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಬೆಲೆಯೇರಿಕೆಯ ಮೂಲ ಎಲ್ಲಿದೆ ಎಂದು ನಾಗರಿಕರು ಆಲೋಚಿಸಬೇಕೆಂದು ಅವರು ಜನತೆಗೆ ಕರೆ ನೀಡಿದರು.

ಕೇರಳ ರಾಜ್ಯದಲ್ಲಿ ಕೇಂದ್ರ ಸರಕಾರದಿಂದ ಆಹಾರ ಧಾನ್ಯಗಳ ಪೂರೈಕೆಯಲ್ಲಿ ಕೊರತೆಯಿದ್ದರೂ, ಮಾವೇಲಿ ಸ್ಟೋರ್‌ಗಳ ಮೂಲಕ ಅಗತ್ಯ 14 ಆಹಾರ ವಸ್ತುಗಳನ್ನು ಕಡಿಮೆ ದರದಲ್ಲಿ ಅಲ್ಲಿನ ಸರಕಾರ ಒದಗಿಸುತ್ತಿದೆ. ಸರಕಾರಕ್ಕೆ ಇಚ್ಛಾ ಶಕ್ತಿ ಇದ್ದರೆ ಇದು ಸಾಧ್ಯ. ಅಂತೆಯೇ ತುಂಬೆ ಅಣೆಕಟ್ಟಿನಲ್ಲಿ ಕಳೆದ ವರ್ಷದಕ್ಕಿಂತ ಮೂರುಪಟ್ಟು ನೀರು ಸಂಗ್ರಹವಾದ ಅನಂತರ ಕುಡಿಯುವ ನೀರನ್ನು ಮಂಗಳೂರು ನಗರದ ಜನತೆಗೆ ನಿರಂತರ ಪೂರೈಕೆ ಮಾಡಲು ಏನು ಅಡ್ಡಿ? ನೀರನ್ನು ಔದ್ಯಮಿಕ ಸಂಸ್ಥೆಗಳಿಗೆ ಒದಗಿಸುವ ಹುನ್ನಾರವೇ ಎಂದು ಯಾದವ ಶೆಟ್ಟಿ ಪ್ರಶ್ನಿಸಿದರು.

ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿ, ಸಂತೋಷ್ ಬಜಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News