ಅಂಧರ ಏಷ್ಯನ್ ಚೆಸ್: ನಾಲ್ವರು ಮುನ್ನಡೆಯಲ್ಲಿ
ಮಣಿಪಾಲ, ಮಾ.24: ಇಲ್ಲಿ ಸ್ಪರ್ಧಿಸುತ್ತಿರುವವರಲ್ಲಿ ಅತ್ಯಧಿಕ ಫಿಡೆ ಶ್ರೇಯಾಂಕಿತ ಆಟಗಾರನೆನಿಸಿದ (2100) ಬಾಂಗ್ಲಾ ದೇಶದ ಹುಸೇನ್ ಇಜಾಜ್ ಅಲ್ಲದೇ ಭಾರತದ ಡಿ. ಕಿಶನ್ ಗಂಗುಲಿ, ಅಶ್ವಿನ್‌ಕೆ. ಮಕ್ವಾನ್ ಹಾಗೂ ಯುಧ್‌ಜೀತ್ ಡೇ ಅವರು ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಅಂಧರಿಗಾಗಿ ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿ ಯೇಷನ್ (ಐಬಿಸಿಎ)ವತಿಯಿಂದ ನಡೆದಿರುವ ಏಷ್ಯನ್ ಚೆಸ್ ಚಾಂಪಿಯನ್ ಷಿಪ್‌ನ ಎರಡನೇ ಸುತ್ತಿನ ಪಂದ್ಯಗಳ ಕೊನೆಗೆ ಗರಿಷ್ಠ ಎರಡು ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಅಂಧರ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌ಬಿ), ಐಬಿಸಿಎ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್‌ಗಳ ಸಹಯೋಗದೊಂದಿಗೆ ಈ ಟೂರ್ನಿಯನ್ನು ಮಣಿಪಾಲ ವಿವಿಯ ಆಶ್ರಯದಲ್ಲಿ ಆಯೋಜಿಸಿದೆ.
ಇಲ್ಲಿ ಅಗ್ರಸೀಡ್ ಪಡೆದಿರುವ ಹುಸೇನ್ ಇಜಾಜ್ ಅವರು ಟಾಪ್ ಬೋರ್ಡ್‌ನಲ್ಲಿ ಭಾರತದ ಸ್ವಪ್ನೀಲ್ ಶಾ ವಿರುದ್ಧ ಆಡಿ ಸುಲಭದ ಜಯ ಗಳಿಸಿದರು. ಬಿಳಿಕಾಯಿಗಳೊಂದಿಗೆ ಆಡಿದ ಸ್ವಪ್ನೀಲ್ ಅವರು ಆಟದಲ್ಲಿ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಾಧ್ಯವಾಗದೇ 33ನೇ ನಡೆಯಲ್ಲಿ ಸೋಲೊಪ್ಪಿಕೊಂಡರು.
ಎರಡನೇ ಬೋರ್ಡ್‌ನಲ್ಲಿ ಕರ್ನಾಟಕ ಕಿಶನ್ ಗಂಗುಲಿ ಅವರು ಒಡಿಸ್ಸಾದ ಸೌಂದರ್ಯ ಕುಮಾರ್ ಪ್ರದಾನ್‌ರನ್ನು ಬಿಳಿಕಾಯಿಯಲ್ಲಿ ಸೋಲಿಸಿದರು. ಅಂಧರ ರಾಷ್ಟ್ರೀಯ ಎ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕು ಬಾರಿ ಚಾಂಪಿಯನ್ ಆಗಿರುವ ಕಿಶನ್ 34ನೇ ನಡೆಯಲ್ಲಿ ಎದುರಾಳಿ ಶರಣಾ ಗುವಂತೆ ಮಾಡಿದರು.
ಇನ್ನುಳಿದ ಪಂದ್ಯಗಳಲ್ಲಿ ಅಶ್ವಿನಿ ಕೆಎಂ ಅವರು ಭಾರತದ ಶಿರಿಸ್ ಪಾಟೀಲ್‌ರನ್ನು ಸೋಲಿಸಿದರೆ, ಯುದ್ಧಜೀತ್ ಡೇ ಅವರು ಶ್ರೀಲಂಕಾದ ಟಿ.ರಶೀದ್‌ರನ್ನು ಸೋಲಿಸಿದರು. ಕೃಷ್ಣ ಉಡುಪ (1.5ಅಂಕ) ಹಾಗೂ ಆರ್ಯನ್ ಬಿ.ಜೋಷಿ (1.5) ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡು ಇಬ್ಬರೂ ಅಂಕವನ್ನು ಹಂಚಿಕೊಂಡರು.
ಚೆಸ್ ಟೂರ್ನಿಯನ್ನು ಆನ್‌ಲೈನ್‌ನಲ್ಲಿ ರೇಡಿಯೊ ಚೆಸ್ ಅಪ್ಲಿಕೇಷನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಅಂಧರ ಚೆಸ್ ಟೂರ್ನಿಯನ್ನು ನೇರ ಪ್ರಸಾರ ಮಾಡುತ್ತಿರುವುದು ಇದೇ ಮೊದಲ ಸಲ ಎಂದು ಹೇಳಲಾಗಿದೆ.