ಪುತ್ತೂರು: ಜವಳಿ ಅಂಗಡಿಯಿಂದ ಕಳವು
ಪುತ್ತೂರು, ಮಾ.24: ಕಳೆದ 10 ದಿನಗಳ ಹಿಂದಷ್ಟೇ ಆರಂಭಗೊಂಡಿದ್ದ ಜವಳಿ ಅಂಗಡಿಯೊಂದರಿಂದ ಸುಮಾರು ರೂ. 3ಲಕ್ಷಕ್ಕೂ ಅಧಿಕ ಬೆಲೆಯ ಬಟ್ಟೆ ಬರೆಗಳು ಕಳವು ಮಾಡಿದ ಘಟನೆ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಮಾಡ್ನೂರು ಗ್ರಾಮದ ಕೆಳಗಿನ ಕಾವು ಎಂಬಲ್ಲಿನ ಅಕ್ಷಯ ಕಟ್ಟಡದಲ್ಲಿರುವ, ನಿತೇಶ್ ಗೌಡ ಎಂಬವರಿಗೆ ಸೇರಿದ ‘ವಿನ್ಯಾಸ್ ರೆಡಿಮೆಡ್ ಆ್ಯಂಡ್ ಟೆಕ್ಸ್‌ಟೈಲ್ಸ್' ಅಂಗಡಿಯಿಂದ ಕಳ್ಳತನ ನಡೆದಿದೆ.
ಅಂಗಡಿಯ ಶೆಟರ್‌ನ ಸೆಂಟ್ರಲ್ ಲಾಕ್ ಮತ್ತು ಸೈಡ್ ಲಾಕನ್ನು ಮುರಿದು ಒಳನುಗ್ಗಿದ ಕಳ್ಳರು ಪ್ಯಾಂಟ್, ಶರ್ಟ್, ಟೀಶರ್ಟ್, ಚೂಡಿದಾರ , ಸೀರೆ, ಮಕ್ಕಳ ಮತ್ತು ಮಹಿಳೆಯರ ಉಡುಪುಗಳು ಹಲವಾರು ಬಟ್ಟೆಬರೆಗಳನ್ನು ಹಾಗೂ ಅಂಗಡಿಯೊಳಗಿದ್ದ ಪಾಸ್‌ಕಾರ್ಡ್, ಎಟಿಎಂ ಕಾರ್ಡ್ ಹಾಗೂ ಬಿಲ್‌ಪುಸ್ತಕಗಳನ್ನು ಕಳವು ಮಾಡಿದ್ದಾರೆ. ‘ವಿನ್ಯಾಸ್ ರೆಡಿಮೆಡ್ ಆ್ಯಂಡ್ ಟೆಕ್ಸ್‌ಟೈಲ್ಸ್ ಜವಳಿ ಅಂಗಡಿ' ಕಳೆದ ಮಾರ್ಚ್ 13ರಂದು ಆರಂಭಗೊಂಡಿತ್ತು. ವ್ಯವಹಾರ ಆರಂಭಿಸಿದ ಹತ್ತನೇ ದಿನದಲ್ಲಿಯೇ ಈ ಕಳವು ಕೃತ್ಯ ನಡೆದಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ, ಸಂಪ್ಯ ಎಸ್ಸೈ ಅಬ್ದುಲ್ ಖಾದರ್, ಈಶ್ವರಮಂಗಲ ಹೊರಠಾಣೆಯ ಎಎಸ್ಸೈ ತಿಮ್ಮಪ್ಪ ಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಷ್ಷು ತಜ್ಞರನ್ನು ಕರೆಸಲಾಗಿದೆ. ಶ್ವಾನವು ಕಳವು ನಡೆದ ಅಂಗಡಿಯಿಂದ ಸಮೀಪದಲ್ಲೇ ಇರುವ ಮುಳಿಯ ಸೈಟಿನ ದ್ವಾರದ ಬಳಿಗೆ ತೆರಳಿ, ಕಳ್ಳರು ಆ ದಾರಿಯಾಗಿ ಬಂದಿರುವ ಸೂಚನೆ ನೀಡಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ನಿರಂತರ ಕಳ್ಳತನ, ಒಂದು ದರೋಡೆ ಪ್ರಕರಣ:
ಕಳೆದ ಒಂದು ತಿಂಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಕಳ್ಳತನ ನಡೆಯುತ್ತಿದ್ದು, ಒಂದು ದರೋಡೆ ಪ್ರಕರಣವೂ ನಡೆದಿದೆ. ಇಲ್ಲಿನ ಕೆಯ್ಯೂರು ಗ್ರಾಮದ ಕೆಯ್ಯೂರು ಶಾಲಾ ಬಳಿಯಿರುವ ಲಾವಣ್ಯ ಸಿ.ರೈ ಎಂಬವರ ಟೈಲರಿಂಗ್ ಅಂಗಡಿಯಿಂದ ಇತ್ತೀಚೆಗಷ್ಟೇ ರೂ.6ಸಾವಿರ ನಗದು ಹಣ ಮತ್ತು 3 ರವಿಕೆ ಫೀಸ್ ಕಳವಾಗಿತ್ತು. ಆ ಬಳಿಕ ಈಶ್ವರಮಂಗಲದ ಹನುಮಗಿರಿ ಪಕ್ಕದ ನಿವಾಸಿ, ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢ ಶಾಲೆಯ ಶಿಕ್ಷಕ ಮುರಳಿಮೋಹನ್ ರೈ ಅವರ ಅಂಗಳದಿಂದ ಸುಮಾರು 55 ಸಾವಿರದಷ್ಟು ಮೌಲ್ಯದ 96 ಕೆಜಿ ಕಾಳುಮೆಣಸು ಕಳವಾಗಿತ್ತು.
ಇದಾದ ಬೆನ್ನಲ್ಲೇ ಈಶ್ವರಮಂಗಲ ಪಂಚಲಿಂಗೇಶ್ವರ ದೇವಾಲಯ ಸಮೀಪದ ನಿವಾಸಿ ಬೀಪಾತುಮ್ಮ ಎಂಬವರ ಮನೆ ದರೋಡೆ ಪ್ರಕರಣ ನಡೆದಿತ್ತು.ಮೆಣಸಿನ ಹುಡಿ ಎರಚಿ ,ಕತ್ತಿ ಹಿಡಿದು ಆ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ 30 ಪವನ್‌ನಷ್ಟು ಅಪಾರ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿತ್ತು.
ಕೆಯ್ಯೂರು ಗ್ರಾಮದ ಮಾಡಾವು ಸಂತೋಷ್‌ನಗರದ ಸಂತೋಷ್ ಕಾಂಪ್ಲೆಕ್ಸ್‌ನಲ್ಲಿರುವ ಡಿ.ಕೆ.ಖಲಂದರ್ ಎಂಬವರಿಗೆ ಸೇರಿದ ಎಂ.ಎಚ್.ಸ್ಟೋರ್‌ನಿಂದ ಮೂರು ದಿನಗಳ ನಾಲ್ಕು ದಿನಗಳ ಹಿಂದೆಯಷ್ಟೇ ಜಿನಸು ಸಾಮಾಗ್ರಿಗಳು ಹಾಗೂ ರೂ.600 ನಗದು ಹಣ ಸೇರಿದಂತೆ ರೂ.25 ಸಾವಿರ ಮೌಲ್ಯದ ವಸ್ತುಗಳು ಕಳವಾಗಿತ್ತು. ಈ ನಡುವೆ ತಿಂಗಳಾಡಿಯಲ್ಲೂ ಕಳ್ಳತನ ನಡೆದಿತ್ತು. ಇದೀಗ ಈ ಜವುಳಿ ಅಂಗಡಿಯಿಂದ ಕಳವು ನಡೆದಿದೆ.