×
Ad

ಕಾಂಗ್ರೆಸ್ ಮುಖಂಡರಿಗೆ ಭಜರಂಗಿಗಳಿಂದ ಕೊಲೆ ಬೆದರಿಕೆ: ಓರ್ವನ ಬಂಧನ

Update: 2017-03-24 21:01 IST

ಮೂಡುಬಿದಿರೆ, ಮಾ.24: ಶಾಸಕ ಅಭಯಚಂದ್ರ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ವಾಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಸೇರಿದಂತೆ ಒಟ್ಟು ಮೂರು ಮಂದಿಯನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ ಕಾರ್ಕಳ ತಾಲೂಕು ಈದು ಗ್ರಾಮದ ಪ್ರವೀಣ್ ಶೆಟ್ಟಿ ಎಂಬಾತನ ಮೇಲೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ಮೂಡುಬಿದಿರೆ ಪೊಲೀಸರು ಶುಕ್ರವಾರ ಈದು ಗ್ರಾಮದ ಭಜರಂಗದಳ ಸದಸ್ಯ ಸಚಿನ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.

ಮಾರ್ಚ್ 21ರ ರಾತ್ರಿ ವಾಲ್ಪಾಡಿಯ ಅರುಣ್ ಕುಮಾರ್ ಶೆಟ್ಟಿಯವರ ಮೊಬೈಲಿಗೆ 7259591411, 9148792405, ಹಾಗೂ 7760065503 ಸಂಖ್ಯೆಗಳಿಂದ ಕರೆ ಮಾಡಿದ ಭಜರಂಗದಳ ಸದಸ್ಯ ಪ್ರವೀಣ್ ಶೆಟ್ಟಿ ಈದುವಿನಲ್ಲಿ ಎಪ್ರಿಲ್ 5ಕ್ಕೆ ನಡೆಯುವ ದೈವಸ್ಥಾನವೊಂದರ ಜಾತ್ರೆಗೆ ಬರುವಂತೆಯೂ, ಅಲ್ಲಿ ಶಾಸಕ ಅಭಯಚಂದ್ರ, ಮಿಥುನ್ ರೈ ಹಾಗೂ ನಿನ್ನನ್ನೂ ಸೇರಿ ಕೊಲೆಗೈಯುವುದಾಗಿ ಹೇಳಿ ಬೆದರಿಕೆಯೊಡ್ಡಿದ್ದಾರೆಂದು ಅರುಣ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟು ಮೂರು ನಂಬರ್‌ಗಳಿಂದ ನಾಲ್ವರು ಆರೋಪಿಗಳು ಕರೆ ಮಾಡಿದ್ದು, ಓರ್ವನನ್ನು ಮಾತ್ರ ಗುರುತಿಸಲಾಗಿದೆ. ಇನ್ನಿತರರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಮೂಡುಬಿದಿರೆ ಪೊಲೀಸರು ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ವಾಟ್ಸಾಪ್ ವೈರಲ್ ಹಿನ್ನೆಲೆ :

ಇತ್ತೀಚಿಗೆ ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ಅಭಯಚಂದ್ರ ಅವರ ಮೇಲೆ ನಡೆದ ಹಲ್ಲೆಯತ್ನ ಹಾಗೂ ಅದರ ನಂತರ ನಡೆದ ಘಟನೆಯ ವೀಡಿಯೋ ತುಣುಕೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿದ್ದ ಅರುಣ್ ಕುಮಾರ್ ಶೆಟ್ಟಿಯ ಮೇಲೆ ಈ ರೀತಿ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಲು ಕಾರಣವೆಂದು ತಿಳಿದುಬಂದಿದೆ.

ಇದರ ಜೊತೆಗೆ ಇತ್ತೀಚಿಗೆ ಉಪವಾಸ ಸತ್ಯಾಗ್ರಹ ನಡೆಸಿದ್ದ ಕಾರ್ಮಿಕ ಮುಖಂಡ ಸುದತ್ತ ಜೈನ್ ಶಿರ್ತಾಡಿಗೂ ಇದೇ ರೀತಿಯ ಕೊಲೆ ಬೆದರಿಕೆಯನ್ನು ಕರೆ ಮಾಡಿದ ಭಜರಂಗದಳ ಸದಸ್ಯರು ನೀಡಿದ್ದು, ಈ ಬಗ್ಗೆ ಸುದತ್ತ ಜೈನ್ ಪೊಲೀಸ್ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಮೂಡುಬಿದಿರೆ ಪೊಲೀಸರು ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಸುದತ್ತ ಜೈನ್ ಒತ್ತಾಯಿಸಿದ್ದಾರೆ. ಸುದತ್ತ ಜೈನ್ ಈ ಹಿಂದಿನಿಂದಲೂ ತಮ್ಮ ಹೋರಾಟಗಳ ಫಲವಾಗಿ ಹಲವಾರು ಬಾರಿ ಜೀವಬೆದರಿಕೆಗಳನ್ನು ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News