ಉಡುಪಿ: ಕೇಂದ್ರ ಸರಕಾರದ ವಿರುದ್ಧ ಎಸ್‌ಡಿಪಿಐ ಧರಣಿ
ಉಡುಪಿ, ಮಾ.24: ಕೇಂದ್ರ ಸರಕಾರದ ಜನ ವಿರೋಧಿ ಧೋರಣೆಯನ್ನು ಖಂಡಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನಸಭಾ ಕ್ಷೇತ್ರದ ವತಿಯಿಂದ ಶುಕ್ರವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ಹಮ್ಮಿಕೊಳ್ಳಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಅಬ್ದುರ್ರಹ್ಮಾನ್ ಮಲ್ಪೆ, ಭಾರತ ಬಡ ದೇಶ ಅಲ್ಲ. ಕಳೆದ 60-70 ವರ್ಷಗಳ ಕಾಲ ನಮ್ಮ ಆಳಿದವರ ಜನ ವಿರೋಧಿ ನೀತಿಯಿಂದಾಗಿ ನಾವು ಬಡವರಾಗಿ ಉಳಿದಿದ್ದೇವೆ. ಭಯೋತ್ಪಾದನೆ ದಾಳಿಗಿಂತ ಹೆಚ್ಚಾಗಿ ಹೊಟ್ಟೆಗೆ ಆಹಾರ ಇಲ್ಲದೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಟೀಕಿಸಿದರು.
ಇಂದು ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಜನರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲವಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ಪರವಾಗಿ ಸರಕಾರ ಎಲ್ಲ ಅವಕಾಶಗಳನ್ನು ಮಾಡಿಕೊಡುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಡುಪಿ ಕ್ಷೇತ್ರ ಅಧ್ಯಕ್ಷ ನಝೀರ್ ಅಂಬಾಗಿಲು, ಕಾರ್ಯದರ್ಶಿ ಸಲೀಂ ಕೊಡಂಕೂರು, ಮುಖಂಡರಾದ ಇಲಿಯಾಸ್ ಸಾಸ್ತಾನ, ರಹೀಂ ಆದಿಉಡುಪಿ ಮೊದಲಾದವರು ಉಪಸ್ಥಿತರಿದ್ದರು.