×
Ad

ಆದಿತ್ಯನಾಥ್ ವಿರುದ್ಧ ಟ್ವೀಟ್ ಮಾಡಿದ ಚಿತ್ರ ನಿರ್ಮಾಪಕ ಶಿರೀಶ್ ಕುಂದರ್ ವಿರುದ್ಧ ಎಫ್ ಐಆರ್

Update: 2017-03-25 12:50 IST

ಹೊಸದಿಲ್ಲಿ, ಮಾ.25: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟ್ವೀಟೊಂದನ್ನು ಮಾಡಿದ ಆರೋಪದ ಮೇಲೆ ಚಿತ್ರ ನಿರ್ಮಾಪಕ ಶಿರೀಶ್ ಕುಂದರ್ ವಿರುದ್ಧ ಹಝ್ರತ್‌ಗಂಜ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಟಿ ಕಾಯಿದೆ 2008ರ ಸೆಕ್ಷನ್ 66 ಅನ್ವಯ ಎಫ್ ಐ ಆರ್ ದಾಖಲಾಗಿದೆ.

ಅಯ್ಯೋಧ್ಯೆಯ ರಾಮಕೋಟ್ ದಲ್ಲಿರುವ ಸೀತಾ ರಸೋಯಿಯ ಠಾಕುರ್ ದ್ವಾರ ಟ್ರಸ್ಟ್ ಕಾರ್ಯದರ್ಶಿ ಅಮಿತ್ ಕುಮಾರ್ ತಿವಾರಿ ಎಂಬವರು ದಾಖಲಿಸಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.

‘‘ಗೂಂಡಾ ಒಬ್ಬನಿಗೆ ಆಡಳಿತ ನಡೆಸಲು ಅನುಮತಿಸಿ ಆತ ಹಿಂಸೆಯನ್ನು ಹತ್ತಿಕ್ಕುತ್ತಾನೆ ಎಂದು ನಿರೀಕ್ಷಿಸುವುದು ಅತ್ಯಾಚಾರಿಯನ್ನು ಅತ್ಯಾಚಾರಗೈಯ್ಯಲು ಅನುಮತಿಸಿ ನಂತರ ಆತನಿಂದ ಅತ್ಯಾಚಾರ ನಿಲ್ಲುವುದು ಎಂದು ನಿರೀಕ್ಷಿಸಿದಂತೆ’’ ಎಂದು ಕುಂದರ್ ಟ್ವೀಟ್ ಮಾಡಿದ್ದರು.

ಮುಂದೆ ಇನ್ನೊಂದು ಟ್ವೀಟ್ ಮಾಡಿದ ಕುಂದರ್ ‘‘ಗೂಂಡಾ ಒಬ್ಬನನ್ನು ಸಿಎಂ ಮಾಡಿ ಆತನಿಂದ ಉತ್ತಮ ವರ್ತನೆ ನಿರೀಕ್ಷಿಸುವುದಾದರೆ, ದಾವೂದ್ ಸಿಬಿಐ ನಿರ್ದೇಶಕನಾಗಬಹುದು ಹಾಗೂ ಮಲ್ಯ ಆರ್‌ಬಿಐ ಗವರ್ನರ್’’ ಎಂದಿದ್ದರು.

ಗೋರಖಪುರದ ಸಂಸದ ಹಾಗೂ ಗೋರಖನಾಥ ಮಠದ ಮುಖ್ಯ ಅರ್ಚಕರಾಗಿರುವ ಆದಿತ್ಯನಾಥ್ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದ ನಂತರ ಲೇಖಕ ಚೇತನ್ ಭಗತ್ ಮಾಡಿದ ಟ್ವೀಟೊಂದಕ್ಕೆ ಪ್ರತಿಕ್ರಿಯೆಯಾಗಿ ಕುಂದರ್ ಮೇಲಿನಂತೆ ಹೇಳಿದ್ದರು.

ಆದರೆ ಟ್ವಿಟ್ಟರಿಗರು ಅವರ ಟ್ವೀಟ್ ವಿರುದ್ಧ ಸಮರ ಸಾರುತ್ತಿದ್ದಂತೆಯೇ ಕುಂದರ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದರು.

ದೂರುದಾರ ತಿವಾರಿ, ರಾಘವ್ ರಾಜಪುತ್ ಎಂಬವರ ವಿರುದ್ಧವೂ ದೂರು ದಾಖಲಿಸಿದ್ದು, ಅವರು ಮುಖ್ಯಮಂತ್ರಿ ಹಾಗೂ ಹಿಂದು ಸ್ವಾಮಿಗಳ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News