×
Ad

ಸಾವಯವ ಬೆಳೆಗಳಿಗೆ ಮಾರುಕಟ್ಟೆ ಒದಗಿಸಿ: ಕ್ಷೇತ್ರೋತ್ಸವದಲ್ಲಿ ರೈತ ಮಹಿಳೆಯ ಆಗ್ರಹ

Update: 2017-03-25 15:35 IST

ಮಂಗಳೂರು, ಮಾ.25: ಕೂಲಿಯಾಳುಗಳ ಕೊರತೆಯ ಹೊರತಾಗಿಯೂ ನಾವೇ ಸಮಯ ಹೊಂದಿಸಿಕೊಂಡು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದೇವೆ. ಹಲವು ರೀತಿಯ ಬೆಳೆಗಳನ್ನೂ ಬೆಳೆಯುತ್ತಿದ್ದೇವೆ. ಆದರೆ ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ನಮಗೆ ಮಾರುಕಟ್ಟೆ ಒದಗಿಸಿ ಎಂದು ಸೂರಿಂಜೆ ಗ್ರಾಮದ ರೈತ ಮಹಿಳೆ ಗೀತಾ ಶೆಟ್ಟಿ ಆಗ್ರಹಿಸಿದರು.

ರಾಜ್ಯ ಸರಕಾರದ ಸಾವಯವ ಭಾಗ್ಯ ಯೋಜನೆಯಡಿ ದ.ಕ. ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಮಂಗಳೂರು ತಾಲೂಕಿನ ರೈತ ಸಂಪರ್ಕ ಕೇಂದ್ರ ಸುರತ್ಕಲ್ ಹೋಬಳಿಯ ಚೇಳ್ಯಾರು- ಸೂರಿಂಜೆಯ ಸುಭಿಕ್ಷ ಸಾವಯವ ಕೃಷಿಕರ ಸಂಘದ ವತಿಯಿಂದ ಆಯೋಜಿಸಲಾದ ಕ್ಷೇತ್ರೋತ್ಸವದಲ್ಲಿ ಅವರು ಅನಿಸಿಕೆ ವ್ಯಕ್ತಪಡಿಸಿದರು.

‘‘ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ಸಾವಯವ ಕೃಷಿಯ ಮೂಲಕ ತರಕಾರಿ, ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದೇನೆ. ಸಾವಯವ ಪದ್ಧತಿಯಿಂದ ಉತ್ಪನ್ನವೇನೋ ಕಡಿಮೆ ಆಗಿರಬಹುದು. ಆದರೆ, ಅದು ಆರೋಗ್ಯಕ್ಕೆ ಅತ್ಯುತ್ತಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯವಾಗಿ ಮಾರಾಟ ಮಾಡಿದರೆ ಅದಕ್ಕೆ ಬೆಲೆಯೇ ಇರುವುದಿಲ್ಲ’’ ಎಂದು ಅವರು ಅಸಮಾಧಾನಿಸಿದರು.

‘‘ಯುವ ಪೀಳಿಗೆ ಕೃಷಿಯಿಂದ ವಿಮುಖವಾಗುತ್ತಿದೆ. ಕೃಷಿಗೆ ಕೂಲಿಯಾಳುಗಳೂ ಸಿಗುವುದಿಲ್ಲ. ಹಾಗಿದ್ದರೂ ಕೃಷಿ ಇಲಾಖೆಯ ಸಹಕಾರದಿಂದ ಮುಂದಿನ ಪೀಳಿಗೆ ಹಾಗೂ ಮಣ್ಣಿನ ಫಲವತ್ತತೆಯನ್ನು ಉಳಿಸುವಲ್ಲಿ ಸಾವಯವ ಕೃಷಿಗೆ ನಮ್ಮಿಂದಾದ ಪ್ರಯತ್ನ ಮಾಡುತ್ತಿದ್ದೇವೆ’’ ಎಂದು ಹಿರಿಯ ಕೃಷಿಕ ಸುಂದರ ಶೇರಿಗಾರ ಅಭಿಪ್ರಾಯಿಸಿದರು.

ಕೃಷಿ ಇಲಾಖೆಯ ಸಹಕಾರದಲ್ಲಿ ಸಾವಯವ ಮೇವು ಬೆಳೆಯುವ ಮೂಲಕ ಅತ್ಯುತ್ತಮವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸೂರಿಂಜೆ ಕುಲ್ಲಂಗಾಲು ಅನಂತ ಪದ್ಮನಾಭ ಭಟ್‌ರವರ ಮನೆಯ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಸುವಿನ ಕರುಗಳಿಗೆ ಸಾವಯವಾಗಿ ಬೆಳೆದ ಮೇವು ಹುಲ್ಲನ್ನು ತಿನ್ನಿಸುವ ಮೂಲಕ ಚಾಲನೆ ನೀಡಿದರು.

ಸುರತ್ಕಲ್ ಹೋಬಳಿಯ ಚೇಳ್ಯಾರು ಹಾಗೂ ಸೂರಿಂಜೆ ಗ್ರಾಮಗಳ ಸುಮಾರು 81 ಸಣ್ಣ ಹಾಗೂ ಅತೀ ಸಣ್ಣ ರೈತರು ಸುಭಿಕ್ಷಾ ಸಾವಯವ ಕೃಷಿಕರ ಸಂಘದಡಿ ನೋಂದಾಯಿಸಿಕೊಂಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಈ ರೈತರಿಗೆ ಒಟ್ಟು 13 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೃಷಿ ಕ್ಷೇತ್ರಾಧಿಕಾರಿ ಆಶಾಲತಾ ಪ್ರಾಸ್ತಾವಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಸಂಘದಲ್ಲಿ ಅತ್ಯುತ್ತಮ ಕೃಷಿಕರಾಗಿ ಗುರುತಿಸಿಕೊಂಡಿರುವ ಚೇಳ್ಯಾರು ಗ್ರಾಮದ ಚಂದ್ರಶೇಖರ ಶೆಟ್ಟಿ, ವಿದ್ಯಾ ಶೆಟ್ಟಿ ಹಾಗೂ ದೇಲಂತಬೆಟ್ಟುವಿನ ದಯಾನಂದ ಬಂಜನ್‌ರವರನ್ನು ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ಶೆಟ್ಟಿ ಭಾಗವಹಿಸಿದ್ದರು. ಮಂಗಳೂರು ತಾ.ಪಂ. ಸದಸ್ಯರಾದ ಪ್ರತಿಭಾ ಎಕ್ಕಾರು, ವಜ್ರಾಕ್ಷಿ ಪಿ. ಶೆಟ್ಟಿ, ಕೃಷಿ ಇಲಾಖೆಯ ಡಾ. ಮುನೇಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಜೇಂದ್ರ ಶೆಟ್ಟಿ, ನಿತ್ಯಾನಂದ, ಶಶಿಕಲಾ, ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಮೊದಲಾವರು ಉಪಸ್ಥಿತರಿದ್ದರು.

ಅನಂತ ಪದ್ಮನಾಭ ಭಟ್ ಸ್ವಾಗತಿಸಿದರು. ಜಿತೇಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News