×
Ad

ಮಾಂಟ್ರಾಡಿ: ಇದ್ದಿಲು ಘಟಕ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

Update: 2017-03-25 15:52 IST

ಮೂಡುಬಿದಿರೆ, ಮಾ.25: ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಎಂಬಲ್ಲಿ 2012ರಿಂದ ಕಾರ್ಯಾಚರಿಸುತ್ತಿರುವ ಒಲಿವಿಯಾ ಲೋಬೋ ಎಂಬವರ ಮಾಲಕತ್ವದ ತೆಂಗಿನ ಚಿಪ್ಪಿನ ಇದ್ದಿಲು ಘಟಕದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ರಮೇಶ್ ಎಂ. ಬೋಧಿ, ಸ್ಥಳೀಯರಲ್ಲಿ ಹಲವರು ಈ ಇದ್ದಿಲು ಘಟಕದ ಹಾರುಬೂದಿಯಿಂದಾಗಿ ಅಸ್ತಮಾ ರೋಗಕ್ಕೆ (ದಮ್ಮು) ತುತ್ತಾಗುತ್ತಿರುವುದಾಗಿ ಪ್ರತಿಭಟನಾಕಾರರು ದೂರಿದ್ದು, ಗ್ರಾಮ ಪಂಚಾಯತ್ ಎಲ್ಲ ನಿಯಮಗಳನ್ನು ಗಾಳಿಗೆ ಈ ಘಟಕಕ್ಕೆ ಡೋರ್ ನಂಬರ್, ಎನ್‌ಒಸಿಯನ್ನು ನೀಡಿದೆ. ಇದೀಗ ಲೈಸೆನ್ಸ್ ನವೀಕರಿಸದೇ ಇರುವ ಈ ಘಟಕದ ವಿರುದ್ಧ ಜಿಲ್ಲಾಡಳಿತ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.

ಸ್ಥಳೀಯ ನಿವಾಸಿಗಳು ರಾತ್ರಿ ಹೊತ್ತಿನಲ್ಲಿ ಸರಿಯಾಗಿ ನಿದ್ದೆ ಮಾಡದೇ ದಿನದೂಡುತ್ತಿದ್ದಾರೆ. ದಿನಪೂರ್ತಿ ಸುಡುವ ಈ ಇದ್ದಿಲಿನ ಫ್ಯಾಕ್ಟರಿಯ ಇಂಗಾಲವು ಇಡೀಯ ಪರಿಸರದಲ್ಲಿ ಹಾರುಬೂದಿಯಾಗಿ ಹಾರಾಡಿ ಪರಿಸರದಲ್ಲಿ ಉಸಿರಾಟಕ್ಕೆ ಜನರಿಗೆ ತೊಂದರೆ ಉಂಟು ಮಾಡುತ್ತಿದೆ. ಬಡಜನರೇ ಅಧಿಕ ಸಂಖ್ಯೆಯಲ್ಲಿರುವ ಸ್ಥಳೀಯ ಪರಿಸರವಾಸಿಗಳು ತಮ್ಮ ಆರೋಗ್ಯ ಮಾತ್ರವಲ್ಲದೇ ತಮ್ಮ ಜಾನುವಾರುಗಳು ಹಾಗೂ ಕೃಷಿಯ ಬಗ್ಗೆಯೂ ಚಿಂತಿತರಾಗಿದ್ದಾರೆ. ಈ ಹಿಂದೆ ಸಿಗುತ್ತಿದ್ದ ಕೃಷಿ ಇಳುವರಿ ಈಗ ಸಿಗುತ್ತಿಲ್ಲ ಎಂಬುದು ಅವರ ರೋಷಕ್ಕೆ ಕಾರಣವಾಗಿದೆ. ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ತೆಂಗು, ಅಡಿಕೆ, ಹಣ್ಣು ಹಂಪಲು, ಗೇರು ಮರ, ಬಾಳೆ ಗಿಡಗಳ ಮೇಲೆ ಈ ಕಾರ್ಖಾನೆಯ ಇದ್ದಿಲು ಹಾರುಬೂದಿ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಹಿಂದೆ ಸಿಗುತ್ತಿದ್ದ ಫಸಲು ಈಗಿಲ್ಲ ಎಂದು ರಮೇಶ ಬೋಧಿ ಹೇಳಿದರು.

ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಮೂಡುಬಿದಿರೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್. ಪಾಂಡ್ರು, ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಘಟಕವನ್ನು ಮುಚ್ಚಿಸಿ ಸ್ಥಳೀಯರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ನೆಲ್ಲಿಕಾರು ಪಂಚಾಯತ್ ಪಿಡಿಒ ಪ್ರಶಾಂತ್ ಕುಮಾರ್ ಶೆಟ್ಟಿ ಸ್ಥಳಕ್ಕಾಗಮಿಸಿ, ಲೈಸೆನ್ಸ್ ನವೀಕರಿಸದೆ ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ ಘಟಕವನ್ನು ಸ್ಥಗಿತಗೊಳಿಸುವಂತೆ ಈಗಾಗಲೇ ನಾವು ಆದೇಶ ನೀಡಿದ್ದೇವೆ. ಆದರೆ ಅದನ್ನು ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಪ್ರತಿಭಟನೆಯ ವೇಳೆ ಸ್ಥಳೀಯರಾದ ಜೋಸೆಫ್ ವಿ.ಕೆ., ಮೌಲಿ ಜೋಶ್, ಕೃಷ್ಣಪ್ಪ ಪೂಜಾರಿ, ಮ್ಯಾಥ್ಯು, ಜೇಕಬ್ ಎಂ.ಡಿ., ಗಿರಿಜಾ ಪೂಜಾರ್ತಿ, ಗುಲಾಬಿ, ಲಿಸಿ, ಪ್ರಮೀಳಾ, ಬಾಬು, ಪ್ರಕಾಶ್ ಪೂಜಾರಿ, ಯಮುನಾ, ಸಂದೀಪ್, ವಿಧೀಶ್, ಭಾರತಿ, ಸವಿತಾ, ಹೇಮನಾಥ್, ಪದ್ಮನಾಭ ಕೆ., ಶೇಖರ್, ಎಂ. ರಮೇಶ್ ಬೋಧಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News