×
Ad

​ಸಹಕಾರ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಕಾನೂನಿನ ಬಲಬೇಕು: ಡಾ.ರಾಜೇಂದ್ರ ಕುಮಾರ್

Update: 2017-03-25 16:08 IST

ಮಂಗಳೂರು, ಮಾ.25: ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಕಾನೂನಿನ ಬಲಬೇಕು. ಆಗ ಮಾತ್ರ ಮಹಿಳೆಯರು ಈ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ದ.ಕ.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ದ.ಕ.ಮತ್ತು ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಜಂಟಿ ಆಶ್ರಯದಲ್ಲಿ ರಾಜ್ಯದ ಆಯ್ದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅವಕಾಶ ನೀಡಿದರೆ ಮಹಿಳೆ ಪುರುಷ ಪ್ರಧಾನ ಸಮಾಜದಲ್ಲೂ ತನ್ನ ಶಕ್ತಿ ತೋರ್ಪಡಿಸಬಲ್ಲಳು. ಆರ್ಥಿಕ ನಿರ್ವಹಣೆಯಲ್ಲಿ ಆಕೆಯ ಸಾಮರ್ಥ್ಯ ಅಪಾರ. ಮಹಿಳೆಯರು ಪ್ರತ್ಯೇಕ ಬ್ಯಾಂಕ್ ಆಗಿ ಗುರುತಿಸಿಕೊಳ್ಳದೆ ಪುರುಷರಿಗೂ ಸರಿಸಮಾನವಾಗಿ ಪೈಪೋಟಿ ನೀಡುವಂತಹ ಪೂರಕ ವಾತಾವರಣ ಸೃಷ್ಟಿಸಬೇಕಾಗಿದೆ. ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ನೀಡಿ ಎಂದು ಸರಕಾರ ಹೇಳುತ್ತಲೇ ಇವೆ. ಆದರೆ ಅದಕ್ಕೆ ಕಾನೂನಿನಲ್ಲಿ ಅವಕಾಶ ಮೂಲಕ ಮೀಸಲಾತಿ ನಿಗದಿಪಡಿಸಬೇಕು ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ನುಡಿದರು.

ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷೆ ಶಕುಂತಳಾ ಕೆ. ಬೆಳ್ದಾಳೆ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ನ ನಿರ್ದೇಶಕಿ ಸರಳಾ ಬಿ.ಕಾಂಚನ, ದ.ಕ.ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಹರೀಶ್ ಆಚಾರ್, ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಅಪರ ನಿಬಂಧಕ ಬಿ.ಎ. ಮಹದೇವಪ್ಪ ಮಾತನಾಡಿದರು.

ರುದ್ರಪ್ಪ ಸ್ವಾಗತಿಸಿದರು. ಸಾವಿತ್ರಿ ರೈ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಎಚ್.ಎಚ್.ಪೂರ್ಣಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News